
ನವದೆಹಲಿ: ಮಂಡ್ಯದಲ್ಲಿ ಸಂಭವಿಸಿರುವ ಮುಗ್ಧ ಬಾಲಕಿಯ ದುರ್ಮರಣ ನನಗೆ ತೀವ್ರ ದುಃಖವುಂಟು ಮಾಡಿದೆ. ನಾಯಿ ಕಡಿತದ ಹಿನ್ನಲೆಯಲ್ಲಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತನ್ನ ತಂದೆ-ತಾಯಿ ಜತೆಯಲ್ಲಿ ದ್ವಿಚಕ್ರ ವಾಹನದ ಮೇಲೆ ತೆರಳುತ್ತಿದ್ದ ಹಸುಕಂದ ಹೀಗೆ ಅಕಾಲ ಮರಣಕ್ಕೆ ತುತ್ತಾಗಿರುವುದು ನನ್ನ ಮನಸ್ಸನ್ನು ಕಲಕಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.
ಈ ಕುರಿತಂತೆ ಟ್ವಿಟ್ ಮಾಡಿರುವ ಅವರು, ಸಂಚಾರಿ ಪೊಲೀಸರು ಕರ್ತವ್ಯದಲ್ಲಿದ್ದಾಗ ಅತ್ಯಂತ ಸೂಕ್ಷ್ಮವಾಗಿ ವರ್ತಿಸಬೇಕು. ವಾಹನಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರನ್ನು ಏಕಾಏಕಿ ರಸ್ತೆಯಲ್ಲಿ ತಡೆದು ನಿಲ್ಲಿಸುವ ಅಥವಾ ಅವರಿಗೆ ಗಾಬರಿ ಉಂಟು ಮಾಡುವ ರೀತಿಯಲ್ಲಿ ವರ್ತಿಸಬಾರದು. ಸ್ವಲ್ಪ ಎಚ್ಚರ ವಹಿಸಿದ್ದಿದ್ದರೆ ಮಗುವಿನ ಸಾವನ್ನು ತಪ್ಪಿಸಬಹುದಿತ್ತು. ಭವಿಷ್ಯದಲ್ಲಿ ಇಂಥ ಅಚಾತುರ್ಯದ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು.
ಸಾರ್ವಜನಿಕರು ಕೂಡ ಸಂಚಾರ ನಿಯಮಗಳನ್ನು ಪಾಲಿಸಬೇಕು. ತಮ್ಮ ಜೀವದ ರಕ್ಷಣೆಗಾಗಿಯೇ ನಿಯಮಗಳನ್ನು ಮೀರಬಾರದು ಎಂಬುದು ನನ್ನ ವಿನಮ್ರ ಮನವಿ. ಈ ನಿಟ್ಟಿನಲ್ಲಿ ಪೊಲೀಸರು ಇನ್ನೂ ಹೆಚ್ಚಿನ ಜಾಗೃತಿಯನ್ನು ಮೂಡಿಸಬೇಕು.
ಮೃತಪಟ್ಟ ಮಗುವಿನ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						