
ದೊಡ್ಡಬಳ್ಳಾಪುರ: ಖಾತೆ ವಿಚಾರದಲ್ಲಿ ಇತ್ತೀಚಿಗಷ್ಟೇ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ನಾವೇ ನಂಬರ್ ಒನ್ ಎಂದು ತಮಗೆ ತಾವೇ ಬೆನ್ನು ತಟ್ಟಿಕೊಂಡಿದ್ದ ದೊಡ್ಡಬಳ್ಳಾಪುರ ನಗರಸಭೆಗೆ ಲೋಕಾಯುಕ್ತ (Lokayukta) ಪೊಲೀಸರು ಬಿಸಿ ಮುಟ್ಟಿಸಿದ್ದು, ಭ್ರಷ್ಟಾಚಾರದ ಆರೋಪ ಅನೇಕರ ಕುತ್ತಿಗೆಗೆ ಹುರುಳಾಗುವ ಕಂಟಕ ಎದುರಾಗಿದೆ.
ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸರ್ಕಾರ ಜಾರಿಗೆ ತಂದಿರುವ ‘ಬಿ’ಖಾತಾ ಆಂದೋಲನದಲ್ಲಿ ಭ್ರಷ್ಟಾಚಾರ ಮಿತಿಮೀರಿದ ಕುರಿತು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸೋಮವಾರ ಸಂಜೆ 3.30 ಸುಮಾರಿಗೆ ಇಲ್ಲಿನ ನಗರಸಭೆ ಕಾರ್ಯಾಲಯಕ್ಕೆ ಲೋಕಾಯುಕ್ತ (Lokayukta) ಪೊಲೀಸರು ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆಯನ್ನು ರಾತ್ರಿ 8.30ರ ಸುಮಾರಿಗೆ ಮುಕ್ತಾಯಗೊಳಿಸಿದ್ದಾರೆ.
ಮತ್ತಷ್ಟು ಪರಿಶೀಲನೆ ಮಂಗಳವಾರವು ಮುಂದುವರೆಯಲಿದೆ. ನಗರಸಭೆಯಲ್ಲಿನ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರು ಇರುವಂತೆ ಲೋಕಾಯುಕ್ತ ಪೊಲೀಸರು ತಿಳಿಸಿರುವುದಾಗಿ ತಿಳಿದುಬಂದಿದೆ.
ಸಾರ್ವಜನಿಕರು ತಮ್ಮ ನಿವೇಷನ, ಮನೆಗಳಿಗೆ ‘ಎ’ ಅಥವಾ ‘ಬಿ’ ಖಾತೆ ಹೊಂದುವ ಬಹುದಿನಗಳ ಬೇಡಿಕೆಯಾಗಿದ್ದ ಖಾತೆ ಹೊಂದುವ ಕನಸಿಗೆ ಕೇವಲ ಐದು ದಾಖಲೆಗಳನ್ನು ಪಡೆದು ಖಾತೆ ಮಾಡಿಕೊಡುವ ನಿಯಮವನ್ನು ಮೂರು ತಿಂಗಳ ಮಾತ್ರ ಜಾರಿಗೆ ತಂದಿತ್ತು.
ಈ ನಿಯಮವನ್ನು ಆಗಸ್ಟ್ ತಿಂಗಳವರೆಗೂ ವಿಸ್ತರಿಸಲಾಗಿದೆ. ಆದರೆ ನಗರಸಭೆಯಲ್ಲಿನ ವಿಳಂಭ ಧೋರಣೆ ಹಾಗೂ ಭ್ರಷ್ಟಾಚಾರದ ಬಗ್ಗೆ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಪ್ರತಿಭಟನೆಗಳನ್ನು ನಡೆಸಿದ್ದರು.
ಈ ಎಲ್ಲದರ ಹಿನ್ನೆಯಲ್ಲಿ ಸೋಮವಾರ ಲೋಕಾಯುಕ್ತ ಪೊಲೀಸರು ದಿಢೀರ್ ಭೇಟಿ ನೀಡುವ ಮೂಲಕ ನಗರಸಭೆಯಲ್ಲಿನ ಕಂದಾಯ ವಿಭಾಗ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿನ ದಾಖಲೆಗಳನ್ನು ವಶಕ್ಕೆ ಪಡೆದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ಎಸ್ಪಿ ಪವನ್ ನೆಜ್ಜೂರ್ ನೇತೃತ್ವದ ಅಧಿಕಾರಿಗಳ ತಂಡ ಮಾಹಿತಿ ಸಂಗ್ರಹ ಮಾಡಿದ್ದಾರೆ.
ಡಿವೈಎಸ್ಪಿ ಗಿರೀಶ್ರೋಡ್ಕರ್,ಇನ್ಸ್ಪೆಕ್ಟರ್ ಉಮಾಮಹೇಶ್, ಬಾಳಪ್ಪ, ಪಿ.ಮಹೇಶ್, ನಂದಕುಮಾರ್, ರಮೇಶ್ ಹಾಗೂ ಸಿಬ್ಬಂದಿ ಇದ್ದಾರೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						