ಧಾರವಾಡ: ಹುಬ್ಬಳ್ಳಿ ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಈಗ ಮಾಡಿರುವ ಆಸ್ತಿ ಸಮೀಕ್ಷೆ ತಾಂತ್ರಿಕವಾಗಿ ಸರಿ ಇಲ್ಲ. ಹೆಸ್ಕಾಂದಿಂದ ಮೀಟರ್ ನೀಡಿರುವ ಮನೆಗಳ ಸಂಖ್ಯೆಗೂ ಮತ್ತು ಎಚ್.ಡಿ.ಎಂ.ಸಿ ಆಸ್ತಿ ಸಂಖ್ಯೆಗೂ ವ್ಯತ್ಯಾಸವಿದೆ. ಈ ಕುರಿತು ಕ್ರಮವಹಿಸಿ, ಸಮನ್ವಯತೆ ಸಾಧಿಸಿ, ಪ್ರತಿ ಆಸ್ತಿಗೂ ಟ್ಯಾಕ್ಸ್ ಬರುವಂತೆ ಕ್ರಮವಹಿಸಬೇಕೆಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ (Santosh lad) ಅವರು ಹೇಳಿದರು.
ಅವರು ಮಂಗಳವಾರ ಮಧ್ಯಾಹ್ನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮತ್ತು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಮಾತನಾಡಿದರು.
ಮಹಾನಗರ ಪಾಲಿಕೆಯಿಂದ ವಿವಿಧ ಉದ್ದೇಶಗಳಿಗಾಗಿ ಬಹಳಷ್ಟು ವರ್ಷಗಳ ಹಿಂದೆ 999 ವರ್ಷ, 99 ವರ್ಷ ಹೀಗೆ ಬಹು ವರ್ಷಗಳ ಅವಧಿಗೆ ಸುಮಾರು 2,474 ರಷ್ಟು ಮಹಾನಗರ ಪಾಲಿಕೆಯ ಆಸ್ತಿಗಳನ್ನು ಲೀಜ್ ಕೊಡಲಾಗಿದೆ. ಇದನ್ನು ಕೆಲವರು ನಿಯಮಬಾಹಿರವಾಗಿ ಮತ್ತೊಬ್ಬರಿಗೆ ಮಾರಾಟ ಮಾಡಿರುವುದು ತಿಳಿದು ಬಂದಿದೆ. ಈ ಕುರಿತು ಪರಿಶೀಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಸಂತೋಷ ಲಾಡ್ ಅವರು ಹೇಳಿದರು.
ಕರ ವಸೂಲಾತಿ ಪ್ರಗತಿ ಆಗಬೇಕು. ಸುಮಾರು 45 ಸಾವಿರಕ್ಕೂ ಅಧಿಕವಾಗಿ ಅನಧಿಕೃತ ಸೈಟ್, ನಿರ್ಮಾಣಗಳು ಆಗಿವೆ. ಇವುಗಳಿಂದ ನಾಗರಿಕ ಸವಲತ್ತು, ಮೂಲ ಸೌಕರ್ಯ ನೀಡಲು ಸಮಸ್ಯೆಗಳು ಆಗುತ್ತಿವೆ. ಈ ಬಗ್ಗೆ ಕ್ರಮವಹಿಸಬೇಕು. ಪ್ರತಿ ಆಸ್ತಿಯೂ ಟ್ಯಾಕ್ಸ್ ವ್ಯಾಪ್ತಿಗೆ ಒಳಪಡಿಸಬೇಕು. ಪ್ರತಿ ವಲಯದಲ್ಲಿ ಈ ಕುರಿತು ಅಭಿಯಾನ ಆಗಬೇಕು ಎಂದು ಅವರು ತಿಳಿಸಿದರು.
ಕೃಷಿ ಭೂಮಿ 5 ಗುಂಟೆ ಸೈಟ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇದು ಅನಧಿಕೃತ. ಇದನ್ನು ನಿಲ್ಲಿಸಲು ಗಂಭಿರವಾಗಿ ಪರಿಗಣಿಸಬೇಕು. ನೋಂದಣಿ ಇಲಾಖೆ, ಸರ್ವೆ ಇಲಾಖೆ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು ಜಂಟಿಯಾಗಿ ಕ್ರಮವಹಿಸಬೇಕು.
ಫಲವತ್ತಾದ ಕೃಷಿ ಭೂಮಿಯನ್ನು ಮನೆ ಕಟ್ಟಲು ಪ್ಲಾಟ್‍ಗಳನ್ನಾಗಿ ಪರಿವರ್ತಿಸಿ, ಮಾರುವುದು ಕಾನೂನುಬಾಹಿರವಾಗಿದೆ. ಈ ಸಂಗತಿಯು ಮುಂದಿನ ದಿನಮಾನಗಳಲ್ಲಿ ಅನೇಕ ರೀತಿಯಿಂದ ತೊಂದರೆ ಆಗಬಹುದು ಎಂದು ಸಚಿವರು ಹೇಳಿದರು.
ಅವಳಿ ನಗರದಲ್ಲಿ ಕುಡಿಯುವ ನೀರಿನ ಕರ ವಸೂಲಾತಿ ಸುಮಾರು 149 ಕೋಟಿ ರೂ.ಗಳ ಬಾಕಿಯಿದೆ. ಜನರಿಗೆ ಸರಿಯಾದ ಸಮಯಕ್ಕೆ ನಿಗಧಿತ ದಿನಗಳಲ್ಲಿ ನೀರು ಸರಬರಾಜು ಮಾಡಬೇಕು. ಎಲ್ಲ ಬಾಕಿ ವಸೂಲಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು.
ಒನ್ ಟೈಮ್ ಸೆಟ್ಲಮೆಂಟ್ ಮಾಡಲು ಬಹಳಷ್ಟು ಶಾಸಕರು ಮತ್ತು ಅಧ್ಯಕ್ಷರು ಒತ್ತಡ ತರುತ್ತಿದ್ದಾರೆ. ಅವರು ಮನವಿ ಸಲ್ಲಿಸಿದ ನಂತರ ಸರ್ಕಾರದ ಗಮನಕ್ಕೆ ತರುತ್ತೇನೆ. ಬಾಕಿ ಮೊತ್ತದ ಬಡ್ಡಿ ಮನ್ನಾ ಮಾಡಲು ಸರಕಾರಕ್ಕೆ ಒನ್ ಟೈಮ್ ಸೆಟ್ಲಮೆಂಟ್ ಆದೇಶಕ್ಕಾಗಿ ಪಾಲಿಕೆಯಿಂದ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸಚಿವರು ತಿಳಿಸಿದರು.
ಅವಳಿ ನಗರ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಬಡಾವಣೆ ನಿರ್ಮಾಣವಾಗದಂತೆ ಅಧಿಕಾರಿಗಳು ಮುನ್ನಚ್ಚರಿಕೆ ವಹಿಸಬೇಕು. ಈಗಾಗಲೇ ಅನುಮತಿ ಇಲ್ಲದೆ ನಿರ್ಮಿಸಿರುವ ಬಡಾವಣೆಗಳಿಗೆ ನೋಟಿಸ್ ನೀಡಿ, ಸೂಕ್ರ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶಿಸಿದರು.
ಅನುಮತಿ ಇಲ್ಲದ ಪಿಜಿಗಳಿಗೆ ನೋಟಿಸ್ ನೀಡಿ
ಲಕ್ಷಾಂತರ ಯುವಕ, ಯುವತಿಯರು ಓದು, ಉದ್ಯೋಗ ಹಾಗೂ ಇತರ ಕಾರಣಗಳಿಗಾಗಿ ಬೇರೆ ಬೇರೆ ಜಿಲ್ಲೆಗಳಿಂದ, ರಾಜ್ಯಗಳಿಂದ ಬಂದು ಅವಳಿನಗರದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ವಸತಿ, ಊಟ ಕಲ್ಪಿಸುವ ಪಿಜಿಗಳ ಬಹುತೇಕ ಮಾಲೀಕರು ಸಂಬಂಧಿಸಿದ ಪ್ರಾಧಿಕಾರದಿಂದ ಅಧಿಕೃತ ಅನುಮತಿ, ಫರ್ಮಿಷನ್ ಪಡೆದಿರುವದಿಲ್ಲ ಎಂಬುದು ತಿಳಿದು ಬಂದಿದೆ ಎಂದರು.
ಅವಳಿನಗರದ ಎಲ್ಲ 12 ವಲಯ ಸಹಾಯಕ ಆಯುಕ್ತರು ತಮ್ಮ ವಲಯದ ಎಲ್ಲ ವಾರ್ಡಗಳಲ್ಲಿ ಸಮೀಕ್ಷೆ ಮಾಡಿ, ಪಿಜಿಗಳು ಎಷ್ಟಿವೆ, ಎಷ್ಟು ಜನ ವಾಸಿಸುತ್ತಿದ್ದಾರೆ, ಮಾಲೀಕರು ಪಿಜಿ ವಾಸಿಗಳ ವೈಯಕ್ತಿಕ ವಿವರ ಪಡೆದಿರುವ ಬಗ್ಗೆ, ಸಮೀಪದ ಪೊಲೀಸ್ ಠಾಣೆಗೆ ಪಿಜಿ ಆರಂಭಿಸಿದ ಕುರಿತು ಮಾಹಿತಿ ನೀಡಿರುವ ಬಗ್ಗೆ ಮತ್ತು ಪಿಜಿಯಲ್ಲಿ ಸಿಸಿಟಿವಿ, ಪಾಕಿರ್ಂಗ್, ವಾಣಿಜ್ಯ ಬಳಕೆಗೆ ವಿದ್ಯತ್, ಕುಡಿಯುವ ನೀರು ಸೌಲಭ್ಯ ಹಾಗೂ ಪಾಲಿಕೆಗೆ ಕಮರ್ಸಿಯಲ್ ಟ್ಯಾಕ್ಸ್ ಭರಿಸುತ್ತಿರುವ ಬಗ್ಗೆ ನಿಗಧಿತ ನಮೂನೆಯಲ್ಲಿ ಮಾಹಿತಿ ಸಂಗ್ರಹಿಸಬೇಕು ಮತ್ತು ತಕ್ಷಣ ಅನಧಿಕೃತ ಪಿಜಿಗಳಿಗೆ ನೋಟಿಸ್ ನೀಡಬೇಕೆಂದು ಸಚಿವ ಸಂತೋಷ ಲಾಡ್ ಅವರು ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅನಧಿಕೃತ ಪಿಜಿಗಳ ಸಮೀಕ್ಷೆಯಲ್ಲಿ ಅಲ್ಲಿ ವಾಸಿಸುತ್ತಿರುವವರಿಗೆ ಯಾವುದೇ ಅನಾನುಕೂಲ, ತೊಂದರೆ ಆಗದಂತೆ ಎಚ್ಚರಿಕೆವಹಿಸಬೇಕು. ಮಾಲೀಕರಿಂದ ಆಗುತ್ತಿರುವ ಆರ್ಥಿಕ ನಷ್ಟ ತಪ್ಪಿಸಬೇಕು.
ಹೆಸ್ಕಾಂ, ಪಾಲಿಕೆಯಿಂದ ಅಗತ್ಯ ಸೌಲಭ್ಯಗಳನ್ನು ಪಡೆದು ಪಾಲಿಕೆ ನಿಯಮಾನುಸಾರ ಕರ ತುಂಬದವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಪಾಲಿಕೆ ಅಧಿಕಾರಿಗಳು ಕ್ರಿಯಾಶೀಲವಾಗಬೇಕು. ಮುಂದಿನ ದಿನಗಳಲ್ಲಿ ತಾವು ಈ ಕುರಿತು ಮಹಾನಗರಪಾಲಿಕೆಯಿಂದ ಸೂಕ್ತ ವರದಿ ಪಡೆದುಕೊಳ್ಳುವದಾಗಿ ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಕೃಷಿ ಭೂಮಿಯನ್ನು ಅನುಮತಿ ಇಲ್ಲದೆ ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಮಾಡಿದರೆ ಅದನ್ನು ರದ್ದುಪಡಿಸಿ, ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಹುಡಾ ಮತ್ತು ಪಾಲಿಕೆ ಅಧಿಕಾರಿಗಳು ವರದಿ ಸಲ್ಲಿಸಿದರೆ ಕ್ರಮ ಜರುಗಿಸಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಅನಧಿಕೃತ ಲೇಔಟ್ ಆಗುವದನ್ನು ನಿಯಂತ್ರಿಸಲು ಜಂಟಿ ಸಮಿತಿ ರಚಿಸಿ, ಕ್ರಮಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಮಹಾನಗರಪಾಲಿಕೆ ಮಹಾಪೌರ ರಾಮಣ್ಣ ಬಡಿಗೇರ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಸಂತೋಷ ಬಿರಾದಾರ ಅವರು ವೇದಿಕೆಯಲ್ಲಿ ಇದ್ದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಅಭಿಯಂತರರು, ಸಿಬ್ಬಂದಿಗಳು, ಇತರರು ಭಾಗವಹಿಸಿದ್ದರು.