ದೊಡ್ಡಬಳ್ಳಾಪುರ: ನಗರಸಭೆಯಲ್ಲಿ ಖಾತೆ ವಿಚಾರವಾಗಿ ಸೋಮವಾರ ನಡೆದ ಲೋಕಾಯುಕ್ತ (Lokayukta) ಅಧಿಕಾರಿಗಳ ದಾಳಿ, ದಾಖಲೆ ಪರಿಶೀಲನೆ ಕಾರ್ಯ ಮಂಗಳವಾರ ರಾತ್ರಿ 7 ಗಂಟೆಗೆ ಅಂತ್ಯಗೊಂಡಿದೆ.
ಹಲವು ಗಂಟೆಗಳ ಕಾಲ ನಿರಂತವಾಗಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದು, ಸಿಬ್ಬಂದಿಯೋರ್ವರ ಮನೆಯಲ್ಲಿ ಪತ್ತೆಯಾದ ಸುಮಾರು 20 ಖಾತೆ ಫೈಲ್‌ಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಮೂಲಗಳು ತಿಳಿಸಿವೆ.
ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸರ್ಕಾರ ಜಾರಿಗೆ ತಂದಿರುವ ‘ಬಿ’ಖಾತಾ ಆಂದೋಲನ ಕುರಿತು ಸಾರ್ವಜನಿಕರ ಖಾತೆ ವಿಳಂಬ, ಅನಧಿಕೃತ ಆಪರೇಟರ್‌ಗಳ ಹಾವಳಿ, ಸೇರಿದಂತೆ ಹಲವು ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳ ದಾಖಲೆ ಪರಿಶೀಲನೆ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ನಗರಸಭೆ ಸಂಪೂರ್ಣ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದವು.