ಬೆಂಗಳೂರು: ತಮಿಳು ನಟ ಕಮಲ್ ಹಾಸನ್ (Kamal Haasan) ಅವರು ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ವಿವಾದಕ್ಕೆ ಗುರಿಯಾಗಿದ್ದಾರೆ.
ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ ಎಂದು ಹೇಳಿದ ಅವರ ಹೇಳಿಕೆ ಬಗ್ಗೆ ಈಗ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕಮಲ್ ಹಾಸನ್ ಅವರ ಹೊಸ ಚಿತ್ರ ಥಗ್ ಲೈಫ್ ಚಿತ್ರದ ಪ್ರೊಮೋಷನ್ಸ್ಗೆ ಚಿತ್ರತಂಡ ಕಾರ್ಯಕ್ರಮ ನಡೆಸಿತ್ತು. ಆ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ (Shiva Rajkumar) ಸಹ ಭಾಗಿಯಾಗಿದ್ರು.
ಶಿವರಾಜ್ ಕುಮಾರ್ ಅವರ ಎದುರಲ್ಲೇ ಕಮಲ್ ಹಾಸನ್ ಹೀಗೆ ಕನ್ನಡದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಕ್ಕೆ ಭಾರಿ ಆಕ್ರೋಶಗಳು ಕೇಳಿ ಬಂದಿವೆ.
ಈ ಕುರಿತಂತೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ (Rajaghatta Ravi) ಕಿಡಿ ಕಾರಿದ್ದು, ಕಮಲ್ ಹಾಸನ್ ಗೆ ಕಲೆ ಕೊಟ್ಟ ದೇವರು ಬುದ್ದಿ ಕಿತ್ಕೊಂಡ್ ಬಿಟ್ಟ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂದು ನಾಡಿನಾದ್ಯಂತ ಹೆಮ್ಮೆಯಿಂದ 1680 ನೇ ಕನ್ನಡ ಸಾಮ್ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಕಮಲ್ ಹಾಸನ್ ಒಂದು ಬಾಲಿಶವಾದ ಹೇಳಿಕೆ ನೀಡಿರುವುದು ಅಕ್ಷಮ್ಯ ಎಂದು ಕಿಡಿಕಾರಿದ್ದಾರೆ.
ಕನ್ನಡ ಭಾಷೆಗೆ ತನ್ನದೆ ಆದ ಸ್ವಂತಿಕೆ ಇತಿಹಾಸ ಸಂಸ್ಕೃತಿ ಇದೆ. ನಮ್ಮ ಭಾಷೆ ಯಾವುದೋ ಎರವಲು ಭಾಷೆಯಲ್ಲ, ತಮಿಳಿಗಿರುವುದು ಕೇವಲ 34 ಅಕ್ಷರ ಕನ್ನಡಕ್ಕಿರುವುದು 49 ಅಕ್ಷರ,
ಇನ್ನೂ ಬೇಕಿದ್ದರೆ ನಾವು ಆ ರೀತಿಯ ಹೇಳಿಕೆ ನೀಡಬಹುದು ಆದರೆ ಕನ್ನಡಿಗರು ಭಾಷಾಭಿಮಾನಿಗಳೆ ಹೊರತು ದುರಭಿಮಾನಿಗಳಲ್ಲ.
ನಿಮ್ಮ (ಕಮಲ್ ಹಾಸನ್) ಸಂಕುಚಿತ ಮನೋಭಾವ ದಿಂದ ಹೊರಬನ್ನಿ, ನಾವೆ ಉತ್ತಮರು ಮೊದಲಿಗರು, ನಾವು ಶ್ರೇಷ್ಠರು ಎಂಬ ಭ್ರಮೆಯಿಂದ ಹೊರ ಬನ್ನಿ.
ಕಮಲ್ ಹಾಸನ್ ಮಾತನಾಡಿರುವ ಮಾತಿಗೆ ಪೂರಕವಾದ ದಾಖಲೆ ಒದಗಿಸ ಬೇಕು, ಇಲ್ಲವಾದರೆ ಕನ್ನಡಿಗರ ಭೇಷರತ್ ಕ್ಷಮೆ ಯಾಚಿಸಬೇಕು, ಇಲ್ಲವಾದಲ್ಲಿ ಮುಂದಿನ ಚಿತ್ರ ಪ್ರದರ್ಶನಕ್ಕೆ ತಡೆ ಒಡ್ಡಲಾಗುವುದು.
ಕಲಾವಿದರು ಕಲಾವಿದರಾಗಿ ಇರಬೇಕು ಅನಗತ್ಯ ವಿಷಯದಲ್ಲಿ ತಲೆ ಹಾಕಬಾರದು,
ಆ ಸಮಯದಲ್ಲಿ ಅಲ್ಲೆ ಇದ್ದ ಶಿವರಾಜ್ ಕುಮಾರ್ ಅವರ ವರ್ತನೆ ಕೂಡ ಬೇಸರ ತಂದಿದೆ ಎಂದು ರಾಜಘಟ್ಟರವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.