ಮೈಸೂರು: ಇಂದು ಇಡೀ ದೇಶ ಐಪಿಎಲ್ (IPL) ಫೈನಲ್ ಪಂದ್ಯಾವಳಿಯ ಕುರಿತು ದೃಷ್ಟಿ ನೆಟ್ಟಿದ್ದು, ಸಿಎಂ, ಡಿಸಿಎಂ ಹೆಚ್‌ಡಿಕೆ ಆದಿಯಾಗಿ ಅನೇಕು RCB ತಂಡಕ್ಕೆ ಶುಭಕೋರಿದ್ದಾರೆ.
ಆದರೆ ವಿಧಾನಪರಿಷತ್ ಸದಸ್ಯ ಸಿಟಿ ರವಿ (CT Ravi) ಅವರು ಆಕ್ಷೇಪ ಎತ್ತಿದ್ದು, ಮಾಡೋಕ್ ಬೇರೆ ಕೆಲಸ ಇದೆ ನಡಿರಿ, ಅದನ್ನು ಮಾಡೋಣ ಎಂದಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಐಪಿಎಲ್‌ನಲ್ಲಿ ಆಟಗಾರರನ್ನು ಹಣದ ಮೇಲೆ ಖರೀದಿಸಲಾಗುತ್ತದೆ. ಈ ಮುಂಚೆ ರಣಜಿಯಲ್ಲಿ ರಾಜ್ಯಗಳ ನಡುವೆ ಪಂದ್ಯಗಳು ನಡೆಯುತ್ತಿದ್ದವು. ಆಟಗಾರರು ರಾಜ್ಯ ಪ್ರತಿನಿಧಿಸುತ್ತಿದ್ದರು. ಟೆಸ್ಟ್ ಹಾಗೂ ಏಕದಿನ ಪಂದ್ಯಗಳೂ ದೇಶ-ದೇಶಗಳ ವಿರುದ್ಧ ಇರುತ್ತವೆ.
ಆದರೆ ಐಪಿಎಲ್ ಒಂದು ರೀತಿಯಲ್ಲಿ ಕಾಕ್‌ಟೇಲ್ ಇದ್ದಂತೆ. ಹೀಗಾಗಿ, ಆರ್‌ಸಿಬಿ ನಮ್ಮ ರಾಜ್ಯದ್ದ ತಂಡ ಎನ್ನುವ ಭಾವನೆ ಇಲ್ಲ. ಯಾರ್ ಜಾಸ್ತಿ ದುಡ್ ಕೊಟ್ರೆ ಆಕಡೆ ಹೋಗ್ತಾರೆ. ಅದುಕ್ ಯಾಕೆ ಮಹತ್ವ ಕೊಡೋಣ, ಮಾಡಬೇಕಾದ ಕೆಲಸ ಬೇರೆ ಇದೆ ಬೇರೆ ಮಾಡೋಣ.
ಈಗಿನ ಐಪಿಎಲ್‌ನಲ್ಲಿ ಇರುವುದು ಒಂದು ರೀತಿಯ ಹಣ ಮಾತ್ರ. ಮುಕ್ತವಾಗಿ ಹರಾಜು ನಡೆಸಿ ಆಟಗಾರರನ್ನು ಖರೀದಿಸುತ್ತಾರೆ. ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಮಾಡಲು ಸಾಕಷ್ಟು ಕೆಲಸ ಇವೆ. ಅಲ್ಲಿ ಯಾವ ರಾಷ್ಟ್ರೀಯವಾದವೂ ಇಲ್ಲ, ಪ್ರಾದೇಶಿಕ ಭಾವನೆ ಇಲ್ಲ.
ಆರ್‌ಸಿಬಿಲ್ ಕನ್ನಡಿಗರು ಎಷ್ಟು ಜನ ಇದ್ದಾರೆ. ಇವತ್ತು ಆರ್‌ಸಿಬಿ ಆಟಗಾರ ನಾಳೆ ಕಾಸು ಕೊಟ್ಟರೆ ಜೆಸಿಬಿಗೆ ಹೋಗಿರುತ್ತಾನೆ. ನಾವು ಪ್ರಾಣ ಕೊಡುವ ಸೈನಿಕರಿಗೆ ಆದ್ಯತೆ ನೀಡಬೇಕು. ಅನ್ನ ಬೆಳೆಯುವ ರೈತರ ಬಗ್ಗೆ ತಲೆಕೆಡಿಸಿಕೊಳ್ಳಬೇಕು. ಹೆಚ್ಚು ಬೆಲೆ ಸಿಗಬೇಕಿರುವುದು ಅವರಿಗೇ. ಕ್ರಿಕೆಟ್ ಅನ್ನು ಕ್ರೀಡೆಯಾಗಷ್ಟೆ ನೋಡೋಣ ಎಂದರು.
18 ವರ್ಷಗಳಿಂದ ವಿರಾಟ್ ಕೊಹ್ಲಿ ಬೆಂಗಳೂರು ತಂಡದಲ್ಲಿಯೇ ಇದ್ದಾರೆ ಅಲ್ಲವೆ ಎಂದರೆ ಸಿಟಿ ಉತ್ತರ ನೀಡಲಿಲ್ಲ.