ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಕಾಲ್ತುಳಿತ ಘಟನೆ (Stampede case) ಸಂಬಂಧಿಸಿದಂತೆ ಅನೇಕ ಕಠಿಣ ಕ್ರಮಗಳಿಗೆ ಆದೇಶಿಸಿದ್ದಾರೆ.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಆರ್‌ಸಿಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಘಟನೆ ದು:ಖಕರವಾಗಿದ್ದು, ಮೃತಪಟ್ಟವರಿಗೆ ಸಂತಾಪ ಕೋರಲಾಯಿತು.
ಇಂದು ಎಂದಿನಂತೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ. ನಿನ್ನೆ ನಡೆದ ಅಹಿತಕರ ಘಟನೆ ಬಗ್ಗೆ ಚರ್ಚಿಸಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
- ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರು ಜಸ್ಟೀಸ್ ಮೈಕೆಲ್ ಕುನ್ಹಾ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚಿಸಲಾಗಿದೆ.
- ಆರ್ ಸಿ ಬಿ ಸಂಸ್ಥೆ ಹಾಗೂ ಕಾರ್ಯಕ್ರಮ ಆಯೋಜಕರಾದ ಡಿಎನ್ ಎ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಈ ಮೂರು ಸಂಸ್ಥೆಗಳ ಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು, ಬಂಧಿಸಲು ಸೂಚನೆ ನೀಡಲಾಗಿದೆ. ಇವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
- ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಪೊಲೀಸ್ ಇನ್ಸಪೆಕ್ಞರ್ ಸೇರಿದಂತೆ ಆ ಭಾಗದ ಎಸಿಪಿ, ಸೆಂಟ್ರಲ್ ಡಿಸಿಪಿ , ಕ್ರೀಡಾಂಗಣದ ಉಸ್ತುವಾರಿ ವಹಿಸಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತರು ಮತ್ತು ಬೆಂಗಳೂರು ನಗರದ ಪೊಲೀಸ್ ಕಮೀಷನರ್ ರನ್ನು ತಕ್ಷಣದಿಂದ ಅಮಾನತ್ತು ಗೊಳಿಸಲು ತೀರ್ಮಾನಿಸಲಾಗಿದೆ.
ಈ ದುರಂತಕ್ಕೆ ಸಂಬಂಧಪಟ್ಟ ಚರ್ಚೆಯ ನಂತರ ತೆಗೆದುಕೊಂಡ ತೀರ್ಮಾನಗಳಾಗಿವೆ.
ಉಪಮುಖ್ಯಮಂತ್ರಿಗಳು, ಗೃಹಸಚಿವರು, ಸಚಿವರಾದ ಎಚ್.ಕೆ.ಪಾಟೀಲ್, ಸುಧಾಕರ್, ಮಹಾದೇವಪ್ಪ ಸೇರಿದಂತೆ ಸಿಬಿಐ ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.
ಮೇಲ್ನೋಟಕ್ಕೆ ಈ ಅಧಿಕಾರಿಗಳ ಬೇಜವಾಬ್ದಾರಿತನ, ಅಲಕ್ಷ್ಯ ಕಂಡುಬರುತ್ತಿದ್ದು, ಇವರುಗಳನ್ನು ಅಮಾನತ್ತುಗೊಳಿಸಲು ತೀರ್ಮಾನಿಸಲಾಗಿದೆ.
ನಾನು ಶಾಸಕರು, ಸಚಿವ, ಡಿಸಿಎಂ ಹಾಗೂ ಮುಖ್ಯಮಂತ್ರಿಯಾದ ನಂತರ ಇಂತಹ ಘಟನೆ ನಡೆದಿರಲಿಲ್ಲ. ಈ ಘಟನೆ ನಮ್ಮನ್ನು ಘಾಸಿಗೊಳಿಸಿದೆ.
ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುತ್ತಾ, ಕುಟುಂಬದವರ ಜೊತೆ ಸರ್ಕಾರವಿದೆ. ನಿನ್ನೆ ಆದೇಶ ನೀಡಿದಂತೆ ಮ್ಯಾಜಿಸ್ಟ್ರೇಟ್ ತನಿಖೆ ಪ್ರಾರಂಭವಾಗಿದೆ. ಈ ಮಹಾದುರಂತದ ಬಗ್ಗೆ ಕೆಲವು ಮಾಹಿತಿಗಳು ದೊರೆತ ನಂತರ, ಸಚಿವಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಮೂರು ಸಂಸ್ಥೆಗಳು ವಿರುದ್ಧದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದಿದ್ದಾರೆ.
ಅಮಾನತುಗೊಂಡ ಪೊಲೀಸ್ ಅಧಿಕಾರಿಗಳು
ಬೆಂಗಳೂರು ನಗರ ಪೊಲೀಸ್ ಕಮಿಷನರ್: ಬಿ.ದಯಾನಂದ
ಹೆಚ್ಚುವರಿ ಪೊಲೀಸ್ ಆಯುಕ್ತ: ವಿಕಾಸ್ ಕುಮಾರ್ ವಿಕಾಸ್
ಕೇಂದ್ರ ಡಿಸಿಪಿ: ಟಿ.ಶೇಖರ್
ಕಬ್ಬನ್ ಪಾರ್ಕ್ ಎಸಿಪಿ: ಬಾಲಕೃಷ್ಣ
ಕಬ್ಬನ್ ಪಾರ್ಕ್ ಪೊಲೀಸ್ ಇನ್‌ಸ್ಪೆಕ್ಟರ್: ಗಿರೀಶ್ ಮತ್ತು ಸಿಬ್ಬಂದಿ
ಇನ್ನೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕಠಿಣ ಕ್ರಮದ ಬೆನ್ನಲ್ಲೇ ಬಿಜೆಪಿ ನಾಯಕರಾದ ಆರ್. ಅಶೋಕ್ ಮತ್ತು ಬಿವೈ ವಿಜಯೇಂದ್ರ ಅವರು ಅಮಾನತ್ತಾದ ಪೊಲೀಸ್ ಅಧಿಕಾರಿಗಳ ಪರ ವಕಾಲತ್ತು ವಹಿಸಿ ಟ್ವಿಟ್ ಮಾಡಿದ್ದಾರೆ.
ಆರ್.ಅಶೋಕ್ ಟ್ವಿಟ್
ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಪೊಲೀಸರು ಮೊದಲೇ ಅಪಾಯದ ಮುನ್ಸೂಚನೆ ನೀಡಿದ್ದರು, ಪೊಲೀಸರು ಹೊಣೆಯಲ್ಲ ಎಂದು ಹೇಳಿದ್ದರು.
ಈಗ ಸಿಎಂ ಸಿದ್ದರಾಮಯ್ಯ ಅವರು ಏಕಾಏಕಿ ಬೆಂಗಳೂರು ಪೊಲೀಸ್ ಕಮಿಷನರ್ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವೆ ನಡೆಯುತ್ತಿರುವ ಶೀತಲ ಸಮರ, ಮುಸುಕಿನ ಗುದ್ದಾಟವೇ ಈ ದುರಂತಕ್ಕೂ ಕಾರಣವಾಯ್ತಾ? ಎಂದಿದ್ದಾರೆ.
ಬಿ ವೈ ವಿಜಯೇಂದ್ರ
ಸ್ವತಃ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೇ ಮುಂದೆ ನಿಂತು ಇಡೀ ಸರ್ಕಾರವೇ ವ್ಯವಸ್ಥೆಯ ಜವಾಬ್ದಾರಿ ಹೊತ್ತು, ಆರ್.ಸಿ.ಬಿ ವಿಜಯೋತ್ಸವದ ಆಚರಣೆಗೆ ಮುಂದಾಗಿ, ಇಂತಹ ಬಹುದೊಡ್ಡ ದುರಂತಕ್ಕೆ ಕಾರಣವಾಗಿರುವಾಗ, ತಮ್ಮ ನೈತಿಕ ಜವಾಬ್ದಾರಿಯನ್ನು ಮರೆತು, ಜನರ ಆಕ್ರೋಶವನ್ನು ತಣ್ಣಗಾಗಿಸಬಹುದೆಂಬ ದುರಾಲೋಚನೆಯಿಂದ ಪೊಲೀಸ್ ಆಯುಕ್ತರೂ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿ ಅಮಾನತು ಮಾಡಿರುವುದು ನಾಚಿಕೆಗೇಡಿನ ಕ್ರಮವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಸಮಾರಂಭಕ್ಕೂ ಮುನ್ನವೇ ಕಾಲ್ತುಳಿತದಿಂದ ಸಾವು-ನೋವಾಗಿರುವ ಸುದ್ದಿ ತಲುಪಿದರೂ ಭಂಡತನದಿಂದ ಸನ್ಮಾನ ಕಾರ್ಯಕ್ರಮವನ್ನು ಮುಗಿಸಿ, ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ಕಾರ್ಯಕ್ರಮ ಮುಂದುವರೆಸಿ, ಕಾಂಗ್ರೆಸ್ ಸರ್ಕಾರ ಕರುನಾಡಿನಲ್ಲಿ ಕರಾಳ ಇತಿಹಾಸ ಸೃಷ್ಟಿಸಿದೆ.
ಜನರ ಆಕ್ರೋಶವನ್ನು ತಣಿಸಲು ಹಾಗೂ ಉಚ್ಚ ನ್ಯಾಯಾಲಯದ ನ್ಯಾಯದಂಡದಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ಕುರ್ಚಿಗೆ ಅಂಟಿ ಕೂರುವ ಸ್ವಾರ್ಥದ ಕ್ರಮವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ, ಉಪ-ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಗೃಹಮಂತ್ರಿ ಡಾ.ಜಿ.ಪರಮೇಶ್ವರ ಅವರಿಗೆ ಕನಿಷ್ಠ ನೈತಿಕತೆ ಇದ್ದರೆ ಈ ದುರಂತ ಘಟನೆಯ ಜವಾಬ್ದಾರಿ ಹೊತ್ತು ಈ ಕೂಡಲೇ ರಾಜಿನಾಮೆ ನೀಡಲಿ ಎಂದಿದ್ದಾರೆ.