ದೊಡ್ಡಬಳ್ಳಾಪುರ: ನಿನ್ನೆ ಎತ್ತಿನಹೊಳೆ ಕಾಮಗಾರಿ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ದೊಡ್ಡಬಳ್ಳಾಪುರ, ಕೊರಟಗೆರೆ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ರೈತರ ಅಹವಾಲು ಆಲಿಸಿದರು.
ಈ ವೇಳೆ ಮಾರ್ಗಮಧ್ಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಹುಲುಕುಡಿ ಬೆಟ್ಟಕ್ಕೆ ಭೇಟಿ ನೀಡಿದ ಅವರು, ವೀರಭದ್ರ ಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ ದೇವಿಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ದೇವಾಲಯದ ಪದಾಧಿಕಾರಿಗಳು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿದರು.
ಸಚಿವ ಕೆಹೆಚ್ ಮುನಿಯಪ್ಪ, ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ ಮತ್ತಿತರರಿದ್ದರು.
ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ವಿಶೇಷ ಆದ್ಯತೆ
“ಎತ್ತಿನಹೊಳೆ ಯೋಜನೆಯಲ್ಲಿ ಮೊದಲು ಕುಡಿಯಲು 14 ಟಿಎಂಸಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಇತರ ತಾಲೂಕಿಗೆ ನೀಡಬೇಕು. ಇದಾದ ನಂತರ ನಾವು ಕೆರೆ ತುಂಬಿಸಲಾಗುವುದು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು.
ಎತ್ತಿನಹೊಳೆ ಯೋಜನೆ ಸಂಬಂಧ ದೊಡ್ಡಬಳ್ಳಾಪುರ ತಾಲೂಕಿನ ಲಕ್ಕೇನಹಳ್ಳಿಯಲ್ಲಿ ಶನಿವಾರ ಉದ್ದೇಶಿತ ಜಲಾಶಯ ಸ್ಥಳವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪರಿಶೀಲಿಸಿ, ಸ್ಥಳೀಯ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.
“ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈ ಸಮತೋಲಿತ ಜಲಾಶಯ ನಿರ್ಮಾಣವಾಗುತ್ತಿದ್ದು, ನಿಮ್ಮ ತಾಲೂಕಿಗೆ ವಿಶೇಷ ಆದ್ಯತೆ ನೀಡಲಾಗುವುದು. ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು” ಎಂದು ಭರವಸೆ ನೀಡಿದರು.
“ಬೆಂಗಳೂರು ಸುತ್ತಮುತ್ತಲ ಐದಾರು ಜಿಲ್ಲೆಗೆ ನೀರು ಒದಗಿಸಲು ನೀವು ಸಹಕಾರ ನೀಡುತ್ತಿದ್ದು, ನಿಮಗೆ ಎಷ್ಟು ಸಾಧ್ಯವೋ ಅಷ್ಟು ಪರಿಹಾರ ನೀಡಲಾಗುವುದು. ನಿಮ್ಮ ಮನವಿಯಂತೆ ಸರ್ಕಾರಿ ಜಾಗದಲ್ಲಿ ಗ್ರಾಮಗಳ ಪುನರ್ವಸತಿ ಕಲ್ಪಿಸುವ ಬಗ್ಗೆ ಆಲೋಚನೆ ಮಾಡಲಾಗುವುದು” ಎಂದರು.
ಹೊಸ ತಂತ್ರಜ್ಞಾನದ ಮೂಲಕ ದುರ್ವಾಸನೆ ಮುಕ್ತ ಕಸ ವಿಲೇವಾರಿ ಕೇಂದ್ರ
“ಇನ್ನು ಕಸದ ವಿಚಾರವಾಗಿ ನೀವು ಪ್ರಸ್ತಾಪ ಮಾಡಿದ್ದೀರಿ. ಕಸ ವಿಲೇವಾರಿಗೆ ಸಂಬಂಧಿಸಿದಂತೆ ದೇಹಲಿ, ಚೆನ್ನೈ, ಹೈದರಾಬಾದ್ ನಲ್ಲಿ ಅಧ್ಯಯನ ಮಾಡಿದ್ದೇವೆ. ಹೊಸ ಮಾದರಿಯಲ್ಲಿ ಒಂದು ದಿನದಲ್ಲಿ ಬಂದ ಕಸವನ್ನು ಮೂರು ದಿನಗಳಲ್ಲಿ ಖಾಲಿ ಮಾಡುವಂತೆ ಸುಡಲಾಗುವುದು. ಈಗಿನಂತೆ ಕಸವನ್ನು ತಂದು ಸುರಿಯುವುದಿಲ್ಲ. ಈ ಕಸದಿಂದ ವಿದ್ಯುತ್ ಹಾಗೂ ಅನಿಲ ಉತ್ಪಾದನೆ ಮಾಡಲಾಗುವುದು” ಎಂದರು.
“ಕಸ ವಿಲೇವಾರಿ ಮಾಡುವ 10 ಎಕರೆ ಜಾಗದ ಒಳಗೆ ಎಲ್ಲಾ ಕಸವನ್ನು ವಿಲೇವಾರಿ ಮಾಡಲಾಗುವುದು. ನೂತನ ಮಾದರಿಯಲ್ಲಿ ಯಾವುದೇ ರೀತಿಯ ದುರ್ವಾಸನೆ ಬಾರದಂತೆ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುವುದು. ರಾಜ್ಯದಲ್ಲಿ ಈ ಕಸ ಸಮಸ್ಯೆಯನ್ನು ನಿವಾರಣೆ ಮಾಡಲಾಗುವುದು” ಎಂದು ಹೇಳಿದರು.
“ಬೆಂಗಳೂರು ನಗರ ಸೇರಿದಂತೆ ಗುಡ್ಡಗಳ ಪಕ್ಕ ಖಾಸಗಿ ಜಮೀನು ಕೊಟ್ಟರೆ, ಅದನ್ನು ಖರೀದಿ ಮಾಡಿ ಕಸ ವಿಲೇವಾರಿ ಮಾಡಲಾಗುವುದು. ಬೆಂಗಳೂರು ನಗರದಲ್ಲೇ ಇದರ ಮೊದಲ ಪ್ರಯೋಗ ಮಾಡುತ್ತೇವೆ. ದುರ್ವಾಸನೆ ಮುಕ್ತ ಕಸ ವಿಲೇವಾರಿ ಕೇಂದ್ರ ನಗರದಲ್ಲಿ ಬಂದರೆ, ಆಗ ಈ ಕಸ ವಿಲೇವಾರಿ ಕೇಂದ್ರಗಳಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ನಿಮಗೂ ಅರಿವಾಗುತ್ತದೆ. ಇನ್ನು ಮಳೆ ಬಂದಾಗ ಕೊಳಚೆ ನೀರು ಹರಿಯದಂತೆ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರವಾಗಿ ಮತ್ತೊಂದು ದಿನ ಇಲ್ಲಿಗೆ ಬಂದು ಚರ್ಚೆ ಮಾಡುತ್ತೇನೆ” ಎಂದು ತಿಳಿಸಿದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						