ಬಳ್ಳಾರಿ: ಜಿಲ್ಲೆಯ ಎಲ್ಲಾ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆಯ ಹಿನ್ನಲೆಯಲ್ಲಿ ದ್ವಿ-ಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ (Helmet) ಧರಿಸಬೇಕು. ಈ ಕುರಿತು ಆಯಾ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ಮತ್ತು ಶಿಕ್ಷಕರು ಜಾಗೃತಿ ನೀಡಬೇಕು ಮತ್ತು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ಅವರು ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಬಳ್ಳಾರಿ ನಗರ ಹಾಗೂ ಬಳ್ಳಾರಿ ಗ್ರಾಮೀಣದಲ್ಲಿರುವ ಎಲ್ಲಾ ಶಾಲೆ ಮತ್ತು ಕಾಲೇಜುಗಳ ಪ್ರಾಂಶುಪಾಲರ ಹಾಗೂ ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.
ವಾಹನ ಚಾಲನೆ ಮಾಡುವ ಬೈಕ್ ಸವಾರ ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮಟ್ ಧರಿಸುವ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಬೇಕು ಹಾಗೂ ಶಾಲಾ ಕಾಲೇಜು ಬಸ್ ಮತ್ತು ಇತರೇ ವಾಹನಗಳು ಸಂಚಾರ ಸುರಕ್ಷತೆಯ ಬಗ್ಗೆ ಪ್ರಾಂಶುಪಾಲರು ಮತ್ತು ಶಿಕ್ಷಕರು ಮಕ್ಕಳಿಗೆ ಮಾಹಿತಿ ನೀಡಬೇಕು ಎಂದರು.
ಶಾಲಾ ಕಾಲೇಜಿನ ಎಲ್ಲಾ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಯವರು ಹಾಗೂ ಮೋಟಾರ್ ಸೈಕಲ್ ಚಲಾಯಿಸುವ ಪ್ರತಿಯೊಬ್ಬ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಡ್ಡಾಯವಾಗಿ ಹೆಲೈಟ್ ಧರಿಸಬೇಕು ಎಂದು ತಿಳಿಸಿದರು.
ಶಾಲಾ ಕಾಲೇಜಿನ ವಾಹನಗಳ ಸಂಬಂಧಪಟ್ಟ ಚಾಲಕರು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಾಲನೆ ಮಾಡದಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ರಸ್ತೆ ಸುರಕ್ಷತೆಯ ಎಲ್ಲಾ ನಿಯಮಗಳನ್ನು ಪಾಲಿಸಲು ತಿಳಿಸಬೇಕು.
ಶಾಲಾ ಕಾಲೇಜಿನ ವಾಹನಗಳಿಗೆ ಎಲ್.ಇ.ಡಿ ಹೆಡ್ ಲೈಟ್‌ಗಳನ್ನು ಮತ್ತು ಡ್ರಿಲ್/ ಕರ್ಕಶ ಶಬ್ದದ ಹಾರ್ನ್ಗಳನ್ನು ಅಳವಡಿಸಬಾರದು. ವಾಹನಗಳಿಗೆ ರಿಪ್ಲೆಕ್ಟರ್ ಸ್ಟಿಕರ್‌ಗಳನ್ನು ಅಳವಡಿಸಬೇಕು. ಕಡ್ಡಾಯವಾಗಿ ಶಾಲಾ ಕಾಲೇಜು ವಾಹನಗಳ ಚಾಲಕರು ಖಾಕಿ ಸಮವಸ್ತ್ರ ಧರಿಸಬೇಕು ಎಂದು ಸೂಚನೆ ನೀಡಿದರು.
ಶಾಲಾ ಕಾಲೇಜಿನ ವಾಹನಗಳ ಚಾಲಕರು ಮದ್ಯಪಾನ, ಡ್ರಗ್ಸ್ ಅಥವಾ ಇತರೆ ಮಾದಕ ದ್ರವ್ಯಗಳ ಆಮಲಿನಲ್ಲಿ ವಾಹನಗಳನ್ನು ಚಾಲನೆ ಮಾಡುವುದು ಕಾನೂನು ಬಾಹಿರ. ಕಂಡು ಬಂದಲ್ಲಿ ಶಿಕ್ಷೆಗೆ ಒಳಪಡುತ್ತಾರೆ ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳು ಬೋರ್ಡಿಂಗ್ ಮತ್ತು ಡಿ-ಬೋರ್ಡಿಂಗ್ ವೇಳೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಶಿಕ್ಷಕರು ಗಮನ ವಹಿಸಬೇಕು. ವಾಹನಗಳಿಗೆ ಕಡ್ಡಾಯವಾಗಿ ವಾಹನದ ನೋಂದಣಿ ಪತ್ರ, ಇನ್ಸೂರೆನ್ಸ್ ಪರ್ಮಿಟ್ ಇರಬೇಕು. ಒಂದು ವರ್ಷಕ್ಕಿಂತ ಮೇಲ್ಪಟ್ಟ ವಾಹನಗಳಿಗೆ ಫಿಟ್‌ನೆಸ್ ಪ್ರಮಾಣ ಪತ್ರ ಹಾಗೂ ಚಾಲಕನು ಅಧಿಕೃತ ಡಿ.ಎಲ್ ಹೊಂದಿರಬೇಕು ಎಂದು ಹೇಳಿದರು.
ಈ ನಿಯಮಗಳನ್ನು ಪಾಲಿಸದಿದ್ದಲ್ಲಿ ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಯಾವುದೇ ನಿರ್ಲಕ್ಷö್ಯತನ ವಹಿಸಿದಲ್ಲಿ ಅಂತ ಕಾಲೇಜಿನ ಆಡಳಿತ ಮಂಡಳಿ ಮತ್ತು ಸಂಬಂಧಪಟ್ಟವರ ವಿರುದ್ಧ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಯವರು ಮತ್ತು ಪೊಲೀಸ್ ಅಧಿಕಾರಿಗಳು ಇದ್ದರು.