ಧಾರವಾಡ: ಪ್ಲಾಟ್ ಖರೀದಿಗೆ (Plot purchase) ಕೊಟ್ಟಂತಹ ಹಣವನ್ನು ಮರಳಿ ಗ್ರಾಹಕನಿಗೆ ಕೊಡುವಂತೆ ಜಿಲ್ಲಾ ಗ್ರಾಹಕರ ಆಯೋಗ ಆದೇಶ ನೀಡಿದೆ.
ಧಾರವಾಡದ ಕೆಲಗೇರಿ ರಸ್ತೆಯ ನಿವಾಸಿ ಶಿವಯೋಗಿ ಬಳ್ಳೂರ ಇವರು ಎದುರುದಾರರ ಮಾಲಿಕತ್ವದ ಎತ್ತಿನಗುಡ್ಡ ಗ್ರಾಮದಲ್ಲಿ ಒಟ್ಟು 12 ಪ್ಲಾಟ್‍ಗಳನ್ನು ಕಂತಿನ ರೂಪದಲ್ಲಿ ರೂ.25 ಲಕ್ಷಕ್ಕೆ ಖರೀದಿಸಿದ್ದರು.
ಎದುರುದಾರರು ಅದಕ್ಕೆ ಖರೀದಿ ಪತ್ರ ಬರೆದುಕೊಟಿರುತ್ತಾರೆ. ಸಾಕಷ್ಟು ಕಾಲಾವಕಾಶ ಕಳೆದರೂ ಎದುರುದಾರರು ಖರೀದಿ ಪತ್ರ ನೋಂದಣಿ ಮಾಡಿಕೊಡಲಿಲ್ಲ. ಈ ಬಗ್ಗೆ ದೂರುದಾರರು ಹಲವು ಬಾರಿ ಎದುರುದಾರರನ್ನು ಸಂಪರ್ಕಿಸಿ ವಿನಂತಿಸಿದರೂ ಏನೂ ಪ್ರಯೋಜನ ಆಗಲಿಲ್ಲ.
ಡೆವಲಪರರ ಇಂತಹ ನಡಾವಳಿಕೆಯಿಂದ ಅವರು ತಮಗೆ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆಂದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಡಿ.07.2024 ರಂದು ದೂರು ಸಲ್ಲಿಸಿದ್ದರು.
ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿ.ಅ. ಬೋಳಶೆಟ್ಟಿ ಸದಸ್ಯರು ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಡೆವಲಪರ್ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ಅವರಿಗೆ ಪ್ಲಾಟನ್ನು ಕೊಡದೇ ಇರುವುದು ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟಿದೆ.
ಆ ಬಗ್ಗೆ ಎದುರುದಾರರ ಮಾಲೀಕರಾದ ಮೊಹಮ್ಮದ ಜಾವೀದ ತಮಟಗಾರ್ ಇವರಿಗೆ ದೂರುದಾರರಿಂದ ಪಡೆದಂತಹ ಮುಂಗಡ ಹಣ ರೂ.25 ಲಕ್ಷ ಶೇ.10 ರಂತೆ ಬಡ್ಡಿ ಲೆಕ್ಕ ಹಾಕಿ ಸಂದಾಯ ಮಾಡುವಂತೆ ಆದೇಶಿಸಿದೆ.
ಜೊತೆಗೆ ಸೇವಾ ನ್ಯೂನ್ಯತೆಯಿಂದ ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ ತಲಾ ರೂ.50,000 ಪರಿಹಾರ ಹಾಗೂ ತಲಾ ರೂ.10,000 ಪ್ರಕರಣದ ಖರ್ಚು ವೆಚ್ಚ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನೀಡುವಂತೆ ಎದುರುದಾರರಿಗೆ ಆಯೋಗ ಆದೇಶಿಸಿದೆ.