ಚಾಮರಾಜನಗರ; ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮ ಅರಣ್ಯ ಭಾಗದಲ್ಲಿ
ನಿನ್ನೆ ಐದು ಹುಲಿಗಳ ( Tiger) ಕಳೇಬರ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.
ಪೊಲೀಸರು ಓರ್ವನನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
ಅರಣ್ಯ ಅಧಿಕಾರಿಗಳು ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯ ವೇಳೆ ಇಲ್ಲಿನ ಕಳ್ಳಬ್ಬೆದೊಡ್ಡಿಯ ಅಪ್ಪ-ಮಗ ಹುಲಿ ಹತ್ಯೆಯಲ್ಲಿ ಭಾಗಿಯಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ವರದಿಯಾಗಿದೆ.
ದನದ ಮಾಂಸಕ್ಕೆ ವಿಷ ಹಾಕಿ, ಆ ಮಾಂಸವನ್ನು ಹುಲಿಗಳು ಸೇವಿಸಿದ ಹಿನ್ನಲೆ ಈ ಹುಲಿಗಳ ಸಾವು ಸಂಭವಿಸಿರುವುದು ದೃಢವಾಗಿದೆ ಎನ್ನಲಾಗಿದ್ದು, ಹೀಗೆ ದನದ ಮಾಂಸಕ್ಕೆ ವಿಷ ಹಾಕಿದ ತಂದೆ ಮಗನ ಪೈಕಿ ತಂದೆ ಸೆರೆಸಿಕ್ಕಿದ್ದು ಮಗ ಪರಾರಿಯಾಗಿದ್ದಾನೆ.
ಸದ್ಯ ತಂದೆಯನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಮಗನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಇನ್ನೂ ಇಂದು ಮೃತ ಹುಲಿಗಳ ಮರಣೋತ್ತರ ಪರೀಕ್ಷೆ ನಡೆಸಿದ ಅರಣ್ಯ ಇಲಾಖೆ ಪೊಲೀಸರು, ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿರುವ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ, ಮಲೆ ಮಹದೇಶ್ವರ ಬೆಟ್ಟದ ಹೂಗ್ಯಂ ವಲಯದಲ್ಲಿ ಸಂಭವಿಸಿದ ಐದು ಹುಲಿಗಳ ಸಾವಿನ ಘಟನೆ ಅತೀವ ನೋವು ತಂದಿದೆ. ಒಂದು ದಿನದಲ್ಲೇ 5 ಹುಲಿಗಳು ಸಾವಿಗೀಡಾಗಿರುವುದು ಹೃದಯ ವಿದ್ರಾವಕ ಘಟನೆ. ಈ ದುರ್ಘಟನೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಘಟನೆ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿಷಪ್ರಾಶನದಿಂದ ಸಾವನ್ನಪ್ಪಿದ್ದ ಲಕ್ಷಣಗಳು ತಜ್ಞರಿಂದ ವ್ಯಕ್ತವಾಗಿವೆ. ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ (NTCA) ಅಧಿಕಾರಿಗಳು, ವನ್ಯಜೀವಿ ತಜ್ಞರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಉನ್ನತ ಮಟ್ಟದ ತನಿಖೆಗೆ ಈಗಾಗಲೇ ಆದೇಶ ನೀಡಲಾಗಿದೆ. ಮರಣೋತ್ತರ ಪರೀಕ್ಷೆ ನೆರವೇರಿದ್ದು, ಪ್ರೋಟೋಕಾಲ್ ಪ್ರಕಾರ ಹುಲಿಗಳ ಅಂತಿಮ ಸಂಸ್ಕಾರವೂ ಆಗಿದೆ. ವರದಿ ಬಂದ ಬಳಿಕ ಇನ್ನಷ್ಟು ಕ್ರಮ ಕೈಗೊಳ್ಳಲಾಗುವುದು.
ವನ್ಯಜೀವಿ ಸಂರಕ್ಷಣೆಯತ್ತ ನಮ್ಮ ನಿಷ್ಠೆ ಬದ್ಧವಾಗಿದೆ. ಎಲ್ಲರ ಸಹಕಾರದಿಂದ ಅರಣ್ಯ ಸಂರಕ್ಷಣೆಯನ್ನು ಇನ್ನಷ್ಟು ಬಲಪಡಿಸೋಣ ಎಂದಿದ್ದಾರೆ.