ದೊಡ್ಡಬಳ್ಳಾಪುರ: ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ 132 ಮಂದಿ ಶಿಕ್ಷಕರ (Teachers) ಹುದ್ದೆ ಖಾಲಿಯಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮೇಲೆ ತೀವ್ರತರವಾದ ಆತಂಕ ಎದುರಾಗಿದೆ.
ಈಗಾಗಲೇ ಮೇ 02 ರಂದು 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶದಲ್ಲಿ ದೊಡ್ಡಬಳ್ಳಾಪುರ ತಾಲೂಕು ಶೇ.70.08 ಪಡೆಯುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಿಗೆ ಹೋಲಿಸಿದರೆ ಕೊನೆ ಸ್ಥಾನಕ್ಕೆ ತಲುಪುವ ಮೂಲಕ ಕಳಪೆ ಸಾಧನೆ ಮಾಡಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 3654 ವಿದ್ಯಾರ್ಥಿಗಳು 2024-25 ನೇ ಸಾಲಿನ ಪರೀಕ್ಷೆಗೆ ಹಾಜರಾಗಿದ್ದು 2561 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 70.08 ರಷ್ಟು ಫಲಿತಾಂಶ ಪಡೆದಿದ್ದಾರೆ.
ಉಳಿದಂತೆ ಮೊದಲ ಸ್ಥಾನವನ್ನು ದೇವನಹಳ್ಳಿ ತಾಲ್ಲೂಕು ಪಡೆದಿದ್ದು, ಇಲ್ಲಿ 3255 ವಿದ್ಯಾರ್ಥಿಗಳು ಹಾಜರಾಗಿದ್ದು 2550 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 78.34 ರಷ್ಟು ಫಲಿತಾಂಶ ಪಡೆದಿದ್ದಾರೆ.
ಎರಡನೇ ಸ್ಥಾನವನ್ನು ನೆಲಮಂಗಲ ತಾಲ್ಲೂಕು ಪಡೆದಿದ್ದು , ಇಲ್ಲಿ 3109 ವಿದ್ಯಾರ್ಥಿಗಳು ಹಾಜರಾಗಿದ್ದು 2300 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 73.97 ರಷ್ಟು ಫಲಿತಾಂಶ ಪಡೆದಿದ್ದಾರೆ.
ಮೂರನೇ ಸ್ಥಾನವನ್ನು ಹೊಸಕೋಟೆ ತಾಲ್ಲೂಕು ಪಡೆದಿದ್ದು, ಇಲ್ಲಿ 3625 ವಿದ್ಯಾರ್ಥಿಗಳು ಹಾಜರಾಗಿದ್ದು 2646 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 72.99 ರಷ್ಟು ಫಲಿತಾಂಶ ಪಡೆದಿದ್ದಾರೆ.
ದೊಡ್ಡಬಳ್ಳಾಪುರಕ್ಕೆ ಕೊನೆ ಸ್ಥಾನ.. ಸರ್ಕಾರಿ ಶಾಲೆಗಳಲ್ಲಿಯೇ ಕಳಪೆ
ಕಳೆದ ವರ್ಷ 2023-24 ನೇ ಸಾಲಿನಲ್ಲಿ ಎರಡನೇ ಸ್ಥಾನ ಪಡೆದಿದ್ದ ದೊಡ್ಡಬಳ್ಳಾಪುರ ತಾಲೂಕು ಈ ವರ್ಷ ಕಳೆಪೆ ಸಾಧನೆ ಮಾಡಿದೆ.. ಅದರಲ್ಲಿಯೂ ಸರ್ಕಾರಿ ಮತ್ತು ಅನುದಾನಿತ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಕ್ಕಳು ಅತಿ ಹೆಚ್ಚು ಅನುತೀರ್ಣರಾಗಿದ್ದಾರೆ.
ಶಿಕ್ಷಣ ಇಲಾಖೆ ಮಾಹಿತಿ ಅನ್ವಯ ದೊಡ್ಡಬಳ್ಳಾಪುರ ತಾಲೂಕಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡಿದ 2171 ಮಕ್ಕಳ ಪೈಕಿ ಬರೋಬ್ಬರಿ 886 ವಿದ್ಯಾರ್ಥಿಗಳು ಅನುತೀರ್ಣರಾಗಿದ್ದಾರೆ.
ಇವರಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ 1463 ಮಕ್ಕಳ ಪೈಕಿ 509 ವಿದ್ಯಾರ್ಥಿಗಳು ಅನುತೀರ್ಣರಾಗುವ ಮೂಲಕ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗಕ್ಕೆ ಮಕ್ಕಳುನ್ನು ಕಳಿಸುತ್ತಿರುವ ಪೋಷಕರಲ್ಲಿ ಆತಂಕವನ್ನು ಉಂಟು ಮಾಡಿದೆ.
ಹೊಣೆ ಯಾರು..?
SSLC ಫಲಿತಾಂಶದಲ್ಲಿ ಎರಡನೇ ಸ್ಥಾನದಿಂದ ಕೊನೆಯ ಸ್ಥಾನಕ್ಕೆ ದೊಡ್ಡಬಳ್ಳಾಪುರ ತಾಲೂಕು ಕುಸಿಯಲು ಕಾರಣ ಏನು..? ಇದರ ಹೊಣೆ ಯಾರು ಹೊರಬೇಕು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಶಿಕ್ಷಕರ ಕೊರತೆ
ದೊಡ್ಡಬಳ್ಳಾಪುರ ತಾಲೂಕಿನಲ್ಲಿ 132 ಶಿಕ್ಷಕರ ಹುದ್ದೆ ಖಾಲಿಯಿದ್ದು, ಅತಿಥಿ ಶಿಕ್ಷಕರನ್ನೇ ಅವಲಂಭಿಸುವಂತಾಗಿದೆ. ಅದರಲ್ಲಿಯೂ ಸಾಸಲು ಹಾಗೂ ತೂಬಗೆರೆ ಹೋಬಳಿ ವ್ಯಾಪ್ತಿಯಲ್ಲಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಅನೇಕ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭವಾಗಿದೆ. ಆದರೆ ಇಂಗ್ಲಿಷ್ ಶಿಕ್ಷಕರ ನೇಮಕ ಎಂಬುದು ಮರೀಚಿಕೆಯಾಗಿದೆ.
ಅಲ್ಲದೆ ಬಹುತೇಕ ಶಾಲೆಗಳಲ್ಲಿ ದೈಹಿಕ ಶಿಕ್ಷಕರು, ಹಿಂದಿ ಶಿಕ್ಷಕರು ಎಂಬುದು ಮರೀಚಿಕೆಯಾಗಿದೆ. ಅಲ್ಲದೆ ಆಷಾಡದಲ್ಲಿ ಅಧಿಕ ಮಾಸ ಎಂಬಂತೆ ಶಿಕ್ಷಕರ ಕೊರತೆಯ ನಡುವೆಯೇ ಈ ತಿಂಗಳು ಹಾಗೂ ಮುಂದಿನ ತಿಂಗಳು 20ಕ್ಕೂ ಹೆಚ್ಚು ಶಿಕ್ಷಕರು ನಿವೃತ್ತಿಯಾಗುತ್ತಿದ್ದಾರೆ. ಅಲ್ಲದೆ ಬಹುತೇಕ ಶಾಲೆಗಳಲ್ಲಿ ಶಿಕ್ಷಕರು ಇಲಾಖೆ ಕಾರ್ಯಕ್ಕೆ, ಬಿಸಿ ಊಟ, ಮೊಟ್ಟೆ, ಬಾಳೆಹಣ್ಣು ವಿತರಣೆಗೆ ಸೀಮಿತವಾಗಿದ್ದಾರೆ.
ಇದರಿಂದಾಗಿ ಬೇಸತ್ತಿರುವ ಪೋಷಕರು ಸರ್ಕಾರಿ ಶಾಲೆಗಳಿಂದ ಮಕ್ಕಳನ್ನು ಬಿಡಿಸಿ, ಸಾಲಸೋಲ ಮಾಡಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುತ್ತಿದ್ದಾರೆ