ಮಂಡ್ಯ, (ಕೆ.ಆರ್ ಪೇಟೆ): ಸಿದ್ದರಾಮಣ್ಣ ನಾನು ವಯಸ್ಸಿನಲ್ಲಿ ಬಹಳ ಚಿಕ್ಕವನು.ನಾನು ಅಲ್ಪಸ್ವಲ್ಪ ಪಕ್ಷದ ಇತಿಹಾಸದ ಬಗ್ಗೆ ತಿಳಿದಿದ್ದೇನೆ. ಯಾರೋ ಕಟ್ಟಿದ ಗೂಡಿಗೆ ಹೋಗಿ ವಾಸ ಮಾಡ್ತಿರೋದು ನೀವು. ನಮ್ಮ ಪಕ್ಷದ ಬಗ್ಗೆ ಮಾತಾಡಬೇಡಿ ಎಂದು ಸಿಎಂ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ( Nikhil Kumaraswamy) ಆಕ್ರೋಶ ವ್ಯಕ್ತಪಡಿಸಿದರು.
ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು ಅವರು.
ಯಾರೋ ಕಟ್ಟಿದ ಪಕ್ಷದಲ್ಲಿ ಹೋಗಿ ಅಧಿಕಾರ ಅನುಭವಿಸ್ತಿರೋದು ನೀವು. 2013ರಲ್ಲಿ ಪರಿಶಿಷ್ಟ ನಾಯಕರನ್ನ ಮಣಿಸಿದ್ದು ಯಾರು? ಈಗ ಮಲ್ಲಿಕಾರ್ಜುನ ಖರ್ಗೆಯನ್ನ ಅವರನ್ನ ರಾಷ್ಟ್ರಕ್ಕೆ ಕಳುಹಿಸಿದ್ರಿ. ಯಾರೋ ಕಟ್ಟಿದ ಗೂಡಿಗೆ ಹೋಗಿ ವಾಸ ಮಾಡ್ತಿರೋದು ನೀವು. ನಮ್ಮ ಪಕ್ಷದ ಬಗ್ಗೆ ನೀವು ಮಾತಾಡಬೇಡಿ ಎಂದು ವಾಗ್ದಾಳಿ ನಡೆಸಿದರು.
2004ರಲ್ಲಿ ಕಾಂಗ್ರೆಸ್‌ನ ಜೊತೆ ಜೆಡಿಎಸ್ ಸಮ್ಮಿಶ್ರ ಸರ್ಕಾರ ಮಾಡಿತ್ತು. ಆಗ ಡಿಸಿಎಂ ಆಗಿದ್ದವರು ಯಾರು.? ನಿಮ್ಮನ್ನ ಗುರುತಿಸಿ ಅಧಿಕಾರ ಕೊಟ್ಟಿ, ಬೆಳೆಸಿದ್ದು ಯಾರು? ಇಷ್ಟು ಬೇಗ ಜೆಡಿಎಸ್‌ನ ಮರೆತುಬಿಟ್ರಾ.? ಸಿಎಂ ಸಿದ್ದರಾಮಯ್ಯ ವಿರುದ್ಧ ನಿಖಿಲ್ ಕುಮಾರಸ್ವಾಮಿ ಎಂದು ವಾಗ್ದಾಳಿ ನಡೆಸಿದರು.
2018 ರಲ್ಲಿ ದೇವೇಗೌಡರ ಮನೆ ಬಾಗಿಲಿಗೆ ಓಡೋಡಿ ಬಂದವರು ಯಾರು? ಆಗ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಏನು ಮಾಡಿದ್ರಿ? 2019ರ ಲೋಕಸಭಾ ಚುನಾವಣೆಯಲ್ಲಿ ಏನು ಮಾಡಿದ್ರಿ. ನಿಮ್ಮ ಜೊತೆ ಗುರುತಿಸಿಕೊಂಡವರನ್ನ ಬೇರೆ ಪಕ್ಷಕ್ಕೆ ಹೋಗುವಂತೆ ಮಾಡಿ ಸರ್ಕಾರ ಬಿಳಿಸಿದ್ದು ಯಾರು? ತೀವ್ರವಾಗಿ ವಾಗ್ದಾಳಿ ನಡೆಸಿದರು.
ನಿಮ್ಮನ್ನ ದೇವೇಗೌಡರು ಹಣಕಾಸಿನ ಮಂತ್ರಿ ಮಾಡಿ ಬೆಳೆಸಿದ್ದು.ಹಲವರು ಹಿರಿಯರನ್ನ ಬಿಟ್ಟು ನಿಮ್ಮಿಂದ ಬಜೆಟ್ ಮಂಡಿಸಿದ್ರು. ಆಗ ಮಾತೃ ಪಕ್ಷದಂತೆ ಜೆಡಿಎಸ್ ಇತ್ತು. ಅಂತಹ ಪಕ್ಷ ಬಿಟ್ಟು ಹೋದವರು ತಾಯಿಗೆ ದ್ರೋಹ ಮಾಡಿದಂತೆ ಎಂದು ಕಿಡಿಕಾರಿದರು.
ಕಾಂಗ್ರೆಸ್‌ಗೆ ನೂರು ವರ್ಷದ ಇತಿಹಾಸ ಇದೆ ಅಂತೀರಾ.? ನಿಮ್ಮ ಪಕ್ಷ ದೇಶದಲ್ಲಿ ಎಷ್ಟು ರಾಜ್ಯದಲ್ಲಿ ಅಧಿಕಾರ ಮಾಡ್ತಿದ್ದೀರಿ? ನೂರು ವರ್ಷದ ಇತಿಹಾಸ ಇರುವ ಪಕ್ಷ ಮೂರು ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ ಎಂದು ರಾಜ್ಯ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
ಜೆಡಿಎಸ್ ಪಕ್ಷದಲ್ಲಿರುವ ಕಾರ್ಯಕರ್ತರು ಎರಡು ಪಕ್ಷಗಳಲ್ಲೂ ಸಿಗಲ್ಲ. ಚಿನ್ನದಂತಹ ಕಾರ್ಯಕರ್ತರು ಜೆಡಿಎಸ್ ನವರು. ಅವರ ಬಗ್ಗೆ ಮಾತನಾಡಬೇಡಿ.
ಕಾರ್ಯಕರ್ತರ ರಕ್ತದ ಕಣ ಕಣದಲ್ಲಿ ಪಕ್ಷ ನಿಷ್ಠೆ ರೂಢಿಸಿದ್ದಾರೆ. ನಮ್ಮ ಪಕ್ಷದ ಬಗ್ಗೆ ಚಿಂತಿಸೋಕೆ ಕಾರ್ಯಕರ್ತರು ಇದ್ದಾರೆ ಎಂದು ಹೇಳಿದರು.
ಪಂಚರತ್ನ ಯಾತ್ರೆ ವೇಳೆ ವಿವಿಧ ಬಗೆಯ ಹಾರ ಹಾಕಿ ಗಿನ್ನಿಸ್ ರೆಕಾರ್ಡ್ ಮಾಡಿದ್ದೀರಾ. ಕುಮಾರಣ್ಣ, ದೇವೇಗೌಡರಿಗೆ ನಿಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದೀರಿ. ಅದಕ್ಕಾಗಿಯೇ ಕೆ.ಆರ್.ಪೇಟೆ ಕಂಡರೆ ಅವರಿಗೆ ಹೆಚ್ಚು ಪ್ರೀತಿ ಎಂದು ಸಂತಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಸಿಎಂ ಆದರೆ ಮಹಿಳೆಯರಿಗೆ 2 ಸಾವಿರ ಅಲ್ಲ ತಿಂಗಳಿಗೆ 5 ಸಾವಿರ ಕೊಡುತ್ತೇವೆ ಎಂದು ನಿಖಿಲ್ ಘೋಷಣೆ ಮಾಡಿದ್ದಾರೆ ಅಲ್ಲದೇ, ಈ ಯೋಜನೆಯಿಂದ ರಾಜ್ಯ ಸರ್ಕಾರದ ಅಭಿವೃದ್ಧಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಬಿ.ಆರ್.ಪಾಟೀಲ್ ಬಹಳ ಹಿರಿಯರು. ಆರೇಳು ಬಾರಿ ಶಾಸಕರಾಗಿದ್ದವರು.ಈ ಹಿಂದೆ ನಮ್ಮ ಪಕ್ಷದಲ್ಲೇ ಇದ್ದವರು. ಕಾಂಗ್ರೆಸ್‌ನಲ್ಲಿ ಗೆದ್ದಿರುವವರ ಅಸಹಾಯಕತೆ ಬೀದಿಯಲ್ಲಿ ಚರ್ಚೆ ಆಗ್ತಿದೆ. ಈ ಸರ್ಕಾರದಲ್ಲಿ ಸ್ವಪಕ್ಷೀಯ ಶಾಸಕರೇ ಅನುದಾನ ಸಿಕ್ತಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸರ್ಕಾರದಲ್ಲಿ ಕನಿಷ್ಟ ಮೂಲಭೂತ ಸೌಲಭ್ಯಕ್ಕೂ ಹಣ ಕೊಡ್ತಿಲ್ಲ. ಸಿದ್ದರಾಮಯ್ಯ ಜೊತೆ ನಾನೂ ಕೂಡ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದೆ ಅಂತಾರೆ. ಲಾಟರಿ ಸಿಎಂ ಅಂತಾ ಕಾಂಗ್ರೆಸ್‌ನ ಶಾಸಕರೇ ನಿಮಗೆ ಬಿರುದು ಕೊಟ್ಟಿದ್ದಾರೆ ಎಂದರು.
ನಿಖಿಲ್ ಮೂರು ಸಲ ಸೋತಿದ್ದಾನೆ. 33 ವರ್ಷಕ್ಕೆ ಮೂರು ಸಲ ಸೋತ್ಬಿಟ್ಟ. ಇನ್ಮುಂದೆ ಮನೆ ಬಿಟ್ಟು ಆಚೆ ಬರೋದಿಲ್ಲ ಅಂತಾರೆ. ನಾನು ದೃಢ ಸಂಕಲ್ಪ ತೊಟ್ಟಿದ್ದೇನೆ. ನನ್ನ ಸೋಲಿಸೋಕೆ ಇಡೀ ಸಚಿವ ಸಂಪುಟ ಬರಬೇಕಿತ್ತಾ? ಇಡೀ ಸಂಪುಟ ಬಂದು ಉಪ ಚುನಾವಣೆ ಮಾಡಿದ್ರು ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ಪಕ್ಷವನ್ನ ಯಾರಿಂದಲೂ ಬುಡಸಮೇತ ಕಿತ್ತಾಕಲು ಸಾಧ್ಯವಿಲ್ಲ. ಕಾರ್ಯಕರ್ತರೇ ಈ ಪಕ್ಷದ ಬೇರುಗಳು. ನಿಮ್ಮ ಚುನಾವಣೆಗಾಗಿ ನನ್ನ ಹೋರಾಟ.
ನಿಮ್ಮ ಜೊತೆಯಲ್ಲೇ ಇರ್ತೇನೆ. ಮುಂದಿನ ಚುನಾವಣೆಯಲ್ಲಿ ನೀವು ಕೈ ಹಿಡಿಯಿರಿ ಎಂದು ಹೇಳಿದರು.
ಈ ಹಿಂದೆ ಕುಮಾರಣ್ಣನ ಸಿಎಂ ಮಾಡೋಕೆ ಏಳಕ್ಕೆ ಏಳು ಕ್ಷೇತ್ರ ಗೆಲ್ಲಿಸಿದ್ರಿ. ಹೆಚ್ಡಿಕೆ ಸಿಎಂ ಆಗಬೇಕು ಅಂತಾ ಎಂಪಿ ಮಾಡಿದ್ರಿ.ನಿಮ್ಮ ಋಣವನ್ನ ಯಾವ ಜನ್ಮದಲ್ಲೂ ತೀರಿಸೋಕೆ ಸಾಧ್ಯವಿಲ್ಲ ಎಂದರು.
ರೈತರ ಪಕ್ಷ ಜೆಡಿಎಸ್, ರೈತರ ಏಳಿಗೆಯೇ ನಮ್ಮ ಧ್ಯೇಯ
ಜೆಡಿಎಸ್‌ನಲ್ಲಿ ಯಾರನ್ನೂ ಬೆಳೆಸಲ್ಲ ಅಂತಾರೆ. ಕೆ ಆರ್ ಪೇಟೆ ಮಂಜಣ್ಣನ ಜಿಪಂ ಸದಸ್ಯನಿಂದ MLA ತನಕ ಬೆಳೆಸಿಲ್ವ?. ಎಷ್ಟೋ ಜನ ಜೆಡಿಎಸ್‌ನಲ್ಲಿ ಬೆಳೆದವರು ಪಕ್ಷ ಬಿಟ್ಟು ಹೋಗಿದ್ದಾರೆ. ನಿಮ್ಮೆಲ್ಲರ ವಿಶ್ವಾಸ ಉಳಿಸಿಕೊಳ್ತೇನೆ. ರೈತರ ಪಕ್ಷ ಜೆಡಿಎಸ್, ರೈತರ ಏಳಿಗೆಯೇ ನಮ್ಮ ಧ್ಯೇಯ. ರಾಜ್ಯದ ಉದ್ದಗಲಕ್ಕೂ ಜನರಲ್ಲಾ ಪಕ್ಷದ ಬಗ್ಗೆ ವಿಶೇಷ ಅಭಿಮಾನ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಆರ್. ಪೇಟೆ ಶಾಸಕ ಹೆಚ್.ಟಿ.ಮಂಜು, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸುರೇಶ್ ಗೌಡ, ರಾಜ್ಯ ವಕ್ತಾರರಾದ ಅಶ್ವಿನ್ ಕುಮಾರ, ಜಿಲ್ಲಾಧ್ಯಕ್ಷ ಡಿ.ರಮೇಶ್, ಮಹಿಳಾ ಘಟಕದ ಅಧ್ಯಕ್ಷ ರೇಖಾ ಮುಖಂಡರಾದ ಜಾನಕಿರಾಮ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.