ದೊಡ್ಡಬಳ್ಳಾಪುರ: ಅಸಮರ್ಪಕ ನೀರಿನ (Water) ಪೂರೈಕೆ ಕಾರಣ ಕಳೆದ 20 ದಿನಗಳಿಂದ ಪರದಾಡುವಂತಾಗಿದ್ದ ಬೀರಯ್ಯನ ಪಾಳ್ಯಕ್ಕೆ ಸಂಜೆಯ ಒಳಗಾಗಿ ನೀರು ಪೂರೈಸಲು ಕ್ರಮಕೈಗೊಳ್ಳಲಾಗುವುದು ಎಂದು ತಾಲೂಕು ಪಂಚಾಯಿತಿ ಇಒ ಮುನಿರಾಜು ಭರವಸೆ ನೀಡಿದ್ದಾರೆ.
ಹರಿತಲೇಖನಿ ವರದಿ ಬೆನ್ನಲ್ಲೇ ಈ ಕುರಿತು ಮಾಹಿತಿ ನೀಡಿರುವ ಇಒ ಮುನಿರಾಜು ಅವರು, ಬೀರಯ್ಯನ ಪಾಳ್ಯದಲ್ಲಿನ ಮೋಟರ್ ಪಂಪ್ ಸುಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಮಸ್ಯೆ ಎದುರಾಗಿದೆ.
ಈ ಕುರಿತಂತೆ ಚನ್ನದೇವಿ ಅಗ್ರಹಾರದ ಪಿಡಿಒ ಚಂದ್ರಶೇಖರ್ ಅವರಿಗೆ ಸೂಚನೆ ನೀಡಲಾಗಿದ್ದು, ಸಂಜೆಯ ಒಳಾಗಾಗಿ ನೂತನ ಮೋಟರ್, ಪಂಪ್ ಅಳವಡಿಸಿ ನೀರು ಪೂರೈಕೆ ಮಾಡಲಾಗುವುದು ಎಂದಿದ್ದಾರೆ.
ಚನ್ನದೇವಿ ಅಗ್ರಹಾರ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೀರಯ್ಯನ ಪಾಳ್ಯ ಗ್ರಾಮದಲ್ಲಿ ಕಳೆದ 20 ದಿನಗಳಿಂದ ನೀರಿನ ಪೂರೈಕೆ ಇಲ್ಲವಾಗಿದ್ದು, ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಈ ಗ್ರಾಮದಲ್ಲಿ ವಾಟರ್ ಮೆನ್ ನಾಲ್ಕು ವರ್ಷಗಳ ಹಿಂದೆ ಅಪಘಾತದಲ್ಲಿ ಸಾವನಪ್ಪಿದ್ದು, ಈ ವರೆಗೆ ವಾಟರ್ ಮೆನ್ ನೇಮಕ ವಾಗದ ಕಾರಣ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಈ ಕುರಿತಂತೆ ಚನ್ನದೇವಿ ಅಗ್ರಹಾರ ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ ಪದೇ ಪದೇ ಮನವಿ ಸಲ್ಲಿಸಿದರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಗ್ರಾಮದ ಮುಖಂಡರಾದ ಕುಮಾರಸ್ವಾಮಿ, ರಾಜಣ್ಣ, ನಾಗರಾಜು ಮುಂತಾದವರು ದೂರಿದ್ದಾರೆ.
ನೀರಿಗಾಗಿ ಅಕ್ಕಪಕ್ಕದ ಜಮೀನುಗಳನ್ನು ಗ್ರಾಮಸ್ಥರು ಆಶ್ರಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸರ್ಕಾರ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧಿಕಾರಿಗಳು ಗ್ರಾಮಗಳಲ್ಲಿ ತೊಂದರೆ ಉಂಟಾಗಂದಂತೆ ಸಮರ್ಪಕ ನೀರು ಪೂರೈಕೆಗೆ ಹಲವು ಸೂಚನೆ ನೀಡಿದರು ಗ್ರಾಮಪಂಚಾಯಿತಿ ಅಧಿಕಾರಿಗಳು ಕ್ರಮಕೈಗೊಳ್ಳದೆ ಉಳಿಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮುಂದುವರೆದು ಸಮರ್ಪಕ ನೀರಿಗಾಗಿ ಒತ್ತಾಯಿಸಿ ಚನ್ನದೇವಿ ಅಗ್ರಹಾರ ಗ್ರಾಮಪಂಚಾಯಿತಿ ಹಾಗೂ ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ಆವರಣದಲ್ಲಿ ಖಾಲಿ ಬಿಂದಿಗೆಗಳೊಂದಿಗೆ ಪ್ರತಿಭಟನೆ ನಡೆಸಲು ಮುಂದಾಗಿದ್ದರು.
ಈಗ ಇಒ ಮುನಿರಾಜು ಅವರ ಭರವಸೆಯಿಂದ ಸಂಜೆಯ ಒಳಗಾಗಿ ನೀರು ದೊರಕಬಹುದೆಂಬ ಆಶಾಭಾವನೆಯಲ್ಲಿ ಬೀರಯ್ಯನಪಾಳ್ಯ ಗ್ರಾಮಸ್ಥರು ಇದ್ದಾರೆ.