ದೊಡ್ಡಬಳ್ಳಾಪುರ: ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ 132 ಮಂದಿ ಶಿಕ್ಷಕರ (Teachers) ಹುದ್ದೆ ಖಾಲಿಯಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮೇಲೆ ತೀವ್ರತರವಾದ ಆತಂಕ ಎದುರಾಗಿದೆ.
ಇದರ ಬೆನ್ನಲ್ಲೇ ನಿನ್ನೆ ದೊಡ್ಡಬೆಳವಂಗಲ ಹೋಬಳಿಯ ಐಯನಹಳ್ಳಿಯಲ್ಲಿ ಶಿಕ್ಷಕರ ಕೊರತೆ, ಸಮಯಕ್ಕೆ ಸರಿಯಾಗಿ ಶಿಕ್ಷಕರು ಬರುತ್ತಿಲ್ಲವೆಂದು ಆರೋಪಿಸಿ ಎಸ್‌ಡಿಎಂಸಿ ಆಡಳಿತ ಮಂಡಳಿ ಹಾಗೂ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.
ಈ ಬೆಳವಣಿಗೆ ರಾಜಕೀಯ ಆರೋಪ- ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಶಿಕ್ಷಕರ ಕೊರತೆ ಎಂದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಕಾರಣ ಎಂದಿರುವ ಬಿಜೆಪಿ ಕಾರ್ಯದರ್ಶಿ ಮಧು ಬೇಗಲಿ ಆರೋಪಕ್ಕೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶರತ್ ಪಟೇಲ್, SSLC ಫಲಿತಾಂಶದಲ್ಲಿ ಕೊನೆಯ ಸ್ಥಾನ, ಶಿಕ್ಷಕರ ಕೊರತೆ ಇದು ನವ ದೊಡ್ಡಬಳ್ಳಾಪುರದ ದುಸ್ಥಿಗೆ ಸಾಕ್ಷಿ ಎಂದು ತಿರುಗೇಟು ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ವಿರೋಧ ಪಕ್ಷದವರಿಗೆ ಕೆಲಸ ಮಾಡಲು ಸಾಧ್ಯವಾಗದಿದ್ದರೆ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವುದು ವಾಡಿಕೆಯಾಗಿಬಿಟ್ಟಿದೆ.
ದೊಡ್ಡಬಳ್ಳಾಪುರದಲ್ಲಿ ರಸ್ತೆ ಸರಿ ಇಲ್ಲ ಎಂದರೆ ಸರ್ಕಾರ ಕಾರಣ ಎನ್ನುತ್ತಾರೆ, ಚರಂಡಿ ಕ್ಲೀನ್ ಮಾಡಿಲ್ಲ ಎಂದರೆ ರಾಜ್ಯ ಸರ್ಕಾರ ಕಾರಣ ಎನ್ನುತ್ತಾರೆ, ದೊಡ್ಡಬಳ್ಳಾಪುರದ ರಸ್ತೆಗಳು ಕೆರೆಯಂತಾಗುತ್ತಿವೆ ಎಂದರೆ ರಾಜ್ಯ ಸರ್ಕಾರ ಕಾರಣ ಎನ್ನುತ್ತಾರೆ, ಶಾಲೆಗಳಲ್ಲಿ ಶಿಕ್ಷಕರಿಲ್ಲ ಎಂದರೆ ರಾಜ್ಯ ಸರ್ಕಾರ ಕಾರಣ ಎನ್ನುತ್ತಾರೆ. ಮತ್ತೆ ಇಲ್ಲಿನ ನಗರಸಭೆ ಆಡಳಿತ ಮಂಡಳಿ, ದೊಡ್ಡಬಳ್ಳಾಪುರದ ಶಾಸಕರು ಆಯ್ಕೆಯಾಗಿರುವುದು ಏತಕ್ಕಾಗಿ..? ರಾಜೀನಾಮೆ ಕೊಟ್ಟು ಮನೆ ಹೋಗಲಿ. ಸರ್ಕಾರ ನೋಡಿಕೊಳ್ಳುತ್ತೆ ಅಲ್ಲವೇ ಎಂದು ಶರತ್ ಪಟೇಲ್ ಕೇಳಿದ್ದಾರೆ.
ಶಿಕ್ಷಕರ ಕೊರತೆ ಈ ಸರ್ಕಾರದ ಸಮಸ್ಯೆಯಲ್ಲ, ಹಿಂದಿನ ಬಿಜೆಪಿ ಸರ್ಕಾರದ ಸಮಸ್ಯೆ ಎಂಬುದನ್ನ ಆರೋಪ ಮಾಡುವ ಮುನ್ನ ತಿಳಿದುಕೊಳ್ಳಬೇಕು. ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು 15 ಸಾವಿರ ಶಿಕ್ಷಕರ ನೇಮಕಾತಿಗೆ ಆದೇಶ ನೀಡಿದ್ದಾರೆ, ಪ್ರಕ್ರಿಯೆ ನಡೆಯುತ್ತಿದೆ.
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಫೇಸ್ಬುಕ್ ಪೋಸ್ಟ್ಗೆ ಸೀಮಿತವಾಗಿದ್ದರು ಎಂಬ ಆರೋಪಕ್ಕೆ ಒಳಗಾಗಿದ್ದ ಎಸ್.ಸುರೇಶ್ ಕುಮಾರ್ ಹಾಗೂ ನಾಗೇಶ್ ಎಷ್ಟು ಶಿಕ್ಷಕರ ನೇಮಕ ಮಾಡಿದ್ದರು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ.
ಆಗಿದ್ದಾಗಿಯೂ ನಮ್ಮ ನಾಯಕರಾದ ಟಿ.ವೆಂಕಟರಮಣಯ್ಯ ಅವರು ಶಿಕ್ಷಣ ಸಚಿವರ ಕಾಡಿಬೇಡಿ, ಶಿಕ್ಷಕರ ವರ್ಗಾವಣೆ ಮಾಡಿಸಿಕೊಂಡು, ಶಿಕ್ಷಕರ ಸಮಸ್ಯೆ ಸರಿ ದೂಗಿಸಿದ್ದರು.
ಆದರೆ ಈಗಿನ ಶಾಸಕರಿಗೆ ದೊಡ್ಡಬಳ್ಳಾಪುರ ತಾಲೂಕಿನ ಬಗ್ಗೆ ಕಾಳಜಿಯೇ ಇಲ್ಲ.. ವಿಧಾನಸಭೆ ಅಧಿವೇಶನದಲ್ಲಿ ಬೇಕಾಬಿಟ್ಟಿ ಮಾತನಾಡುವುದು, ಪೇಪರ್ ಅರಿದು ಸಭಾಧ್ಯಕ್ಷರ ಮೇಲೆ ಎಸೆದು ಅಮಾನತ್ತಾಗುವುದೇ ಆಗಿದೆ. ಇವರ ತಾಲೂಕಿನ ಬಗೆಗಿನ ಕಾಳಜಿ ಚುನಾವಣೆ ಸಂದರ್ಭದಲ್ಲಿ ಮಾತ್ರ ನೆನಪಾಗುತ್ತೆ ಅಷ್ಟೇ.
ಈಗಾಗಲೇ ಹಾಲಿ ಶಾಸಕರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ನಾ ಬಿಜೆಪಿ ಶಾಸಕ ಆದರೂ ನಮ್ಮ ದೊಡ್ಡಬಳ್ಳಾಪುರ ತಾಲೂಕಿಗೆ ಅನ್ಯಾಯ ಮಾಡಿಲ್ಲ ಎಂದು. ಮತ್ತೆ ಶಿಕ್ಷಕರ ಕೊರತೆ, ರಸ್ತೆ ಅದ್ವಾನ ಆಗಿರುವುದು, ಅಭಿವೃದ್ಧಿ ಕಾರ್ಯ ನಡೆಯದೇ ಇರುವುದನ್ನು ಸರ್ಕಾರದ ಗಮನಕ್ಕೆ ಶಾಸಕರು ತರುತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.
ಈ ಹಿಂದೆ ಹಾಲಿ ಶಾಸಕರು ನಮ್ಮ ನಾಯಕರ ವಿರುದ್ಧ ಸರ್ಕಾರಕ್ಕೆ ಮನವಿ ಪತ್ರ ಸಮರ್ಪಕವಾಗಿ ಸಲ್ಲಿಸಲು ಬರಲ್ಲ ಎಂದು ಆರೋಪಿಸಿದ್ದರು. ಮತ್ತೆ ಹಾಲಿ ಶಾಸಕರು ಸಮರ್ಪಕವಾಗಿ ಮನವಿ ಸಲ್ಲಿಸಿ ದೊಡ್ಡಬಳ್ಳಾಪುರ ಉದ್ದಾರ ಮಾಡಿರೋದು ಏನು..?
ಇದೇನಾ ನವ ದೊಡ್ಡಬಳ್ಳಾಪುರ..? ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫಲಿತಾಂಶದಲ್ಲಿ ಎಂದಿಗೂ ಹಿಂದೆ ಬೀಳದ ದೊಡ್ಡಬಳ್ಳಾಪುರ ತಾಲೂಕು ಈ ವರ್ಷ ಜಿಲ್ಲೆಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.. ಇದು ನವದೊಡ್ಡಬಳ್ಳಾಪುರದ ಕೊಡುಗೆಯಾ? ಇದರ ಹೊಣೆ ಶಾಸಕರು ಏಕೆ ಹೊರಲ್ಲ..?
ದೊಡ್ಡಬಳ್ಳಾಪುರ ಶಾಸಕರು ಶಿಕ್ಷಣ ಕ್ಷೇತ್ರದ ಎಷ್ಟು ಸಭೆ ನಡೆಸಿದ್ದಾರೆ.? SSLC, PUC ಫಲಿತಾಂಶ ಹೆಚ್ಚಳಕ್ಕೆ ದೊಡ್ಡಬಳ್ಳಾಪುರ ಶಾಸಕರ ಕೊಡುಗೆಯೇನು..? ದೊಡ್ಡಬಳ್ಳಾಪುರದ ಶಿಕ್ಷಕರ ಕೊರತೆ ಕುರಿತು ಶಿಕ್ಷಣ ಸಚಿವರ ಗಮನಕ್ಕೆ ಎಷ್ಟು ಸರಿ ತಂದಿದ್ದಾರೆ.? ಎಂದು ಸರಣಿ ಪ್ರಶ್ನೆ ಮಾಡಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಶಿಕ್ಷಕರ ಕೊರತೆ ಕುರಿತು ರಾಜ್ಯ ಸರ್ಕಾರದ ಗಮನಕ್ಕೆ ತರಲು ಶಾಸಕ ಧೀರಜ್ ಮುನಿರಾಜು ವಿಫಲವಾಗಿರುವುದೇ ಮುಖ್ಯ ಕಾರಣ ಎಂದು ಈ ಮೂಲಕ ಶರತ್ ಪಟೇಲ್ ಆರೋಪಿಸಿದ್ದಾರೆ.
ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ 132 ಮಂದಿ ಶಿಕ್ಷಕರ ಕೊರತೆ.. ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಕಾರಣವೆಂದ ಮಧು ಬೇಗಲಿ