ದೊಡ್ಡಬಳ್ಳಾಪುರ: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿನ 1,777 ಎಕರೆ ಫಲತ್ತಾದ ಕೃಷಿ ಭೂಮಿಯನ್ನು ಕೆಎಐಡಿಬಿ ಸ್ವಾಧೀನದಿಂದ ಕೈಬಿಡಲು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರು ಕೈಗೊಂಡಿರುವ ನಿರ್ಧಾರವನ್ನು ಸ್ವಾಗತಿಸಿ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ರೈತ ಸಂಘಟನೆ, ಕಾರ್ಮಿಕ ಸಂಘಟನೆ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು, ಚನ್ನರಾಯಪಟ್ಟಣದಲ್ಲಿ ನಡೆದ ಹೋರಾಟ ದೇಶದ ಸ್ವಾತಂತ್ರ್ಯ ನಂತರದ ನಡೆದಿರುವ ಐತಿಹಾಸಿಕ ಹೋರಾಟವಾಗಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಲಿದೆ.
ಹಸಿರು, ಕೆಂಪು ಹಾಗೂ ಹಳದಿ ಬಾವುಟಗಳು ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಸತ್ಯಕ್ಕೆ ಜಯವಾಗಲಿದೆ ಎನ್ನುವ ಭರವಸೆಯನ್ನು ಹೋರಾಟಗಾರರಲ್ಲಿ ಮೂಡಿಸಿದೆ.
ಕೈಗಾರಿಕೆಗಳ ಅಭಿವೃದ್ದಿಗೆ ಯಾರ ವಿರೋಧವು ಇಲ್ಲ. ಆದರೆ ನೂರಾರು ಜನರಿಗೆ ಉದ್ಯೋಗ, ಅನ್ನ ನೀಡುತ್ತಿರುವ ಫಲವತ್ತಾದ ಕೃಷಿ ಜಮೀನನ್ನು ಅಭಿವೃದ್ಧಿ ಹೆಸರಿನಲ್ಲಿ ಸ್ವಾಧೀನಪಡಿಸಿಕೊಳ್ಳುವ ಅವೈಜ್ಞಾನಿಕ ನೀತಿಗಳ ವಿರುದ್ದ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಕಾರ್ಪೋರೆಟ್ ಕಂಪನಿಗಳ ಒತ್ತಡದ ನಡುವೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಹಾಗೂ ಜನರಪರ ಹೋರಾಟಗಾರರಿಗೆ ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕುಗಳಲ್ಲಿ ಅವೈಜ್ಞಾನಿಕವಾಗಿ ನಡೆಯುತ್ತಿರುವ ಭೂಸ್ವಾಧೀನವನ್ನು ತಕ್ಷಣ ನಿಲ್ಲಿಸಬೇಕು. ರಾಜಧಾನಿಗೆ ಸಮೀಪದಲ್ಲೇ ಇರುವ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ರೈತರಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಪ್ರೋತ್ಸಾನ ಕಲ್ಪಿಸಿದರೆ ಗ್ರಾಮೀಣ ಭಾಗದಲ್ಲಿನ ಲಕ್ಷಾಂತರ ಜನರಿಗೆ ಉದ್ಯೋಗ ದೊರೆಯಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದರು.
ಸಂಭ್ರಮಾಚರಣೆಯಲ್ಲಿ ರಾಜ್ಯ ರೈತ ಸಂಘ,ಕನ್ನಡ ಪಕ್ಷ, ಸಿಪಿಐಎಂ, ವಿವಿಧ ಕನ್ನಡಪರ ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.