ದೊಡ್ಡಬಳ್ಳಾಪುರ: ನಗರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ (Hospital) ಆವರಣದ ಸರ್ವೆ ನಂ.28 ರಲ್ಲಿ ಹೆಚ್ಚುವರಿ ಆರೋಗ್ಯ ಸೌಲಭ್ಯಗಳನ್ನು ನಿರ್ಮಿಸುವ ಸಲುವಾಗಿ ಸರ್ವೆ ಮಾಡೊದನ್ನು ನಿಲ್ಲಿಸುವಂತೆ ಕನ್ನಡಿಗರ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ತಾಲೂಕು ಘಟಕದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ, ಆಸ್ಪತ್ರೆ ಆಡಳಿತ ಅಧಿಕಾರಿಗೆ ದೂರು ನೀಡಲಾಗಿದೆ.
ಈ ಕುರಿತಂತೆ ಮಾತನಾಡಿದ ಮುಖಂಡರು, ದೊಡ್ಡಬಳ್ಳಾಪುರ ತಾಲ್ಲೂಕು ಆಸ್ಪತ್ರೆ ಆವರಣ ಸರ್ವೆ ನಂ.28 ರಲ್ಲಿ ಟೋಟಲ್ ಸ್ಪೇಷನ್ ಸರ್ವೆ ಮಾಡಿ ಹೆಚ್ಚುವರಿ ಆರೋಗ್ಯ ಸೌಲಭ್ಯಕ್ಕಾಗಿ 100 ಹಾಸಿಗೆಯ ತಾಲ್ಲೂಕು ಆಸ್ಪತ್ರೆ 2ನೇ ಮಹಡಿಯಲ್ಲಿ 50 ಹಾಸಿಗೆಯ ಕ್ರಿಟಿಕಲ್ ಕೇರ್ ಕಟ್ಟಡ ನಿರ್ಮಿಸುವ ಸಲುವಾಗಿ ನಕ್ಷೆಗಳನ್ನು ತಯಾರಿಸಲು ಸರ್ವೆ ಮಾಡಲಾಗುತ್ತಿದೆ ಎಂದು ಗಮನಕ್ಕೆ ಬಂದಿದೆ.

ಈಗಾಗಲೇ ಸರ್ಕಾರಿ ಆದೇಶದ ಅನ್ವಯ ದೊಡ್ಡಬಳ್ಳಾಪುರ ತಾಲ್ಲೂಕು ಆಸ್ಪತ್ರೆಯನ್ನು 100 ಹಾಸಿಗೆಗಳಿಂದ 250 ಹಾಸಿಗೆಗಳಾಗಿ ಗ್ರಾಮೀಣ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ 2 ಹಂತಗಳಲ್ಲಿ ಮೊದಲನೇ ಹಂತ ರೂ.11,300.00 ಲಕ್ಷಗಳು 2ನೇ ಹಂತ 5,400,00 ಲಕ್ಷಗಳು ಒಟ್ಟಾರೆ 16,700.00 ಲಕ್ಷಗಳಿಗೆ ಅನುಮೋದನೆ ನೀಡಲಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕು, ಸಿದ್ದೇನಾಯಕನಹಳ್ಳಿ ಸರ್ವೆ ನಂ. 20 ರಲ್ಲಿ 9-38 ಎಕೆರೆ/ಗುಂಟೆ ಜಮೀನು ಗುರುತಿಸಿರುವ ನಿವೇಶನದಲ್ಲಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರು ಜಿಲ್ಲಾಸ್ಪತ್ರೆಯ ಶಂಕು ಸ್ಥಾಪನೆ ಸಹ ನೇರವೇರಿಸಿದ್ದಾರೆ.
ಅದರಂತೆಯೇ ಕಾಮಗಾರಿಯ ಪ್ರಧಾನ ಮಂತ್ರಿ ಆಯುಷ್ಠಾನ್ ಭಾರತ್ ಆರೋಗ್ಯ ಮೂಲ ಸೌಕರ್ಯ ಮಿಷನ್ ಹಾಗೂ ಕರ್ನಾಟಕ ಸರ್ಕಾರ ಅಡಿಯಲ್ಲಿ ಅಂದಾಜು ಮೊತ್ತ ರೂ.2335.00 ಲಕ್ಷಗಳಿಗೆ ಆಡಳಿತಾತ್ಮಕ ಅನುಮೋದನೆ ಆಗಿರುತ್ತದೆ.
ಮುಖ್ಯ ಇಂಜಿನಿರ್ ರವರ ಕಛೇರಿಯ ತಾಂತ್ರಿಕ ಮಂಜೂರು ಮಾಡಿ ತಾಂತ್ರಿಕ ಮಂಜೂರಾತಿ ನೀಡಿರುತ್ತಾರೆ. ಇದರ ಬೆಳವಣಿಗೆಯ ಮಧ್ಯ ಜುಲೈ.14 ರಂದು ಕಾಮಗಾರಿಯನ್ನು ನಿಲ್ಲಿಸುವಂತೆ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ.
ಅಲ್ಲದೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ (ತಾಯಿ ಮಗು) ಆಸ್ಪತ್ರೆ ಸರ್ವೆ ನಂ.28 ರಲ್ಲಿ ಸರ್ವೆ ಮಾಡಿ 100 ಹಾಸಿಗೆಯ ಕಟ್ಟಡ ಅದರ ಮೇಲೆ ಕ್ರಿಟಿಕಲ್ ಕೇರ್ ಕಟ್ಟಡ ಕಟ್ಟಲು ಸರ್ವೆ ಮಾಡುತ್ತಿದ್ದು, ಸಾರ್ವಜನಿಕರಲ್ಲಿ ಅನುಮಾನ ವ್ಯಕ್ತವಾಗುತ್ತಿದೆ.
ಸರ್ವೆ ನಂ.20 ರಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡವನ್ನು ನಿಲ್ಲಿಸಿ, ಇಲ್ಲಿ ಕಟ್ಟುವ ಉದ್ದೇಶವೇನು..? ಇದನ್ನು ಕರವೇಯು ಉಗ್ರವಾಗಿ ಖಂಡಿಸುತ್ತೇವೆ. ಹಾಗೂ ಇಲ್ಲಿ ಸರ್ವೆ ಮಾಡಿದರೆ ಸರ್ವೆಗೆ ಅಡ್ಡಿಪಡಿಸುವುದಲ್ಲದೇ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಸ್‌ಎಲ್‌ಎನ್ ವೇಣು, ಉಪಾಧ್ಯಕ್ಷ ಜೋಗಹಳ್ಳಿ ಅಮ್ಮು, ಕಾರ್ಯದರ್ಶಿ ಮಂಜು, ಖಜಾಂಚಿ ಆನಂದ್, ನಗರಧ್ಯಕ್ಷ ಶ್ರೀನಗರ ಬಶೀರ್ ಇದ್ದರು.