ದೊಡ್ಡಬಳ್ಳಾಪುರ: ತಾಲೂಕಿನ ಮೂಲಕ ಹಾದು ಹೋಗಿರುವ ಬೆಂಗಳೂರು – ಹಿಂದೂಪುರ ರಾಜ್ಯ ಹೆದ್ದಾರಿಯಲ್ಲಿ ತ್ಯಾಜ್ಯ (Garbage) ಹಾವಳಿ ಮಿತಿಮೀರಿದೆ.
ದೊಡ್ಡಬಳ್ಳಾಪುರ ತಾಲೂಕಿನ ಮೇಲಿನ ನಾಯಕರಂಡಹಳ್ಳಿ ಹಾಗೂ ಕೆಳಗಿನಜೂಗನಹಳ್ಳಿ ನಡುವೆ ರಾಜ್ಯ ಹೆದ್ದಾರಿಯ ಅಕ್ಕ ಪಕ್ಕದಲ್ಲಿಯೇ ಕಾರ್ಖಾನೆಯ ತ್ಯಾಜ್ಯವನ್ನು ಚೀಲಗಳಲ್ಲಿ ತುಂಬಿ ಎಸೆಯಲಾಗಿದೆ.
ಇದರಿಂದಾಗಿ ಈ ವ್ಯಾಪ್ತಿಯಲ್ಲಿ ಹೆಚ್ಚಾಗಿರುವ ವನ್ಯಜೀವಿಗಳಿಗೆ ಪ್ರಾಣಹಾನಿ ಉಂಟಾಗುವ ಆತಂಕ ಎದುರಾಗಿದೆ.
ಇತ್ತೀಚೆಗಷ್ಟೆ ಹೊಸಹಳ್ಳಿ ರಸ್ತೆಯಲ್ಲಿ ಕೈಗಾರಿಕಾ ತ್ಯಾಜ್ಯ ಸುರಿದು ಪರಿಸರ ಹಾಳುಮಾಡುವ ದುಷ್ಕ್ರತ್ಯ ಎಸೆಗಲಾಗಿತ್ತು. ಇದರ ಬೆನ್ನಲ್ಲೇ ಈ ರೀತಿ ರಾಜ್ಯ ಹೆದ್ದಾರಿಯ ಅಕ್ಕಪಕ್ಕದಲ್ಲಿಯೇ ತ್ಯಾಜ್ಯದ ಮೂಟೆಗಳನ್ನು ಬಿಸಾಡಲಾಗಿದೆ.
ಇನ್ನೂ ಈ ವ್ಯಾಪ್ತಿಯ ಹಲವೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಮೇಲಿನಜೂಗಾನಹಳ್ಳಿ ಗ್ರಾಮಪಂಚಾಯಿತಿಗೆ ಸೂಚನೆ ನೀಡಲಾಗಿದ್ದರು, ಅಳವಡಿಸಲು ಮುಂದಾಗದೇ ಇರುವ ಕಾರಣ ಈ ರೀತಿಯ ಕೃತ್ಯವೆಸೆಗಿದವರ ಪತ್ತೆ ಕಾರ್ಯಕ್ಕೆ ತೊಡಕಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ಸಮೀಪದ ರಾಜ್ಯ ಹೆದ್ದಾರಿಯಲ್ಲೇ ವಿವಿಧೆಡೆ ಸುಮಾರು 20ಕ್ಕೂ ಹೆಚ್ಚು ಚೀಲ ತ್ಯಾಜ್ಯ ಮೂಟೆಗಳು ಎಸೆದಿರುವುದು ಭಕ್ತರ ಆಕ್ರೋಶಕ್ಕೂ ಕೂಡ ಕಾರಣವಾಗಿದೆ.
ಪರಿಸರಕ್ಕೆ ಮಾರಕ
ಗಾರ್ಮೆಂಟ್ಸ್ ಕಾರ್ಖಾನೆಗೆ ಸೇರಿರುವ ಚೀಲದಲ್ಲಿ ಅನೇಕ ಪುಡಿ ಬಟ್ಟೆಗಳನ್ನು ತುಂಬಿ ತಂದು ಎಸೆಯಲಾಗಿದೆ. ಈ ಚೀಲಗಳಲ್ಲಿ ಕೆಲವು ಹೊಡೆದು ಪಾಲಿಸ್ಟರ್ ಮುಂದಾದ ಬಟ್ಟೆ ಪೀಸುಗಳು ಅರಣ್ಯ ಪ್ರದೇಶಕ್ಕೆ ಸೇರುತ್ತಿದೆ. ಇದರಿಂದ ಪರಿಸರಕ್ಕೆ ಹಾನಿಯುಂಟಾಗಲಿದೆ.
ಕೂಡಲೇ ತ್ಯಾಜ್ಯ ತೆರವಿಗೆ ಘಾಟಿ ಅಭಿವೃದ್ಧಿ ಪ್ರಾಧಿಕಾರವಾಗಲಿ, ಗ್ರಾಮ ಪಂಚಾಯಿತಿಯಾಗಲಿ ಕ್ರಮಕೈಗೊಳ್ಳಬೇಕು. ಹಾಗೂ ಈ ರೀತಿ ಬೇಜವಬ್ದಾರಿ ತೋರುವ ಕಿಡಿಗೇಡಿಗಳನ್ನು ಪತ್ತೆಹಚ್ಚಲು ಪೊಲೀಸರಿಗೆ ಅನುಕೂಲವಾಗುವಂತೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಪ್ರಯಾಣಿಕ ಗೌರಿಬಿದನೂರು ಸತೀಶ್ ರೆಡ್ಡಿ ಒತ್ತಾಯಿಸಿದ್ದಾರೆ.
ಕಿಡಿಗೇಡಿಗಳು ತ್ಯಾಜ್ಯವನ್ನು ಎಸೆದಿರುವ ಸ್ಥಳ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದೆ.