ಬೆಂಗಳೂರು: ಮೊನ್ನೆಯಷ್ಟೇ ನಟ ದರ್ಶನ್ (Darshan) ಅಭಿಮಾನಿಗಳು ಎನ್ನಲಾಗುತ್ತಿರುವವರಿಂದ ಅಶ್ಲೀಲ ಮೆಸೇಜ್ ಮಾಡಿದ್ದಾರೆ ಎಂದು ಮಾಜಿ ಸಂಸದೆ ರಮ್ಯಾ (Ramya) ದೂರಿನ ಬೆನ್ನಲ್ಲೇ ನಿರ್ದೇಶಕ ಎಸ್.ನಾರಾಯಣ್ (S.Narayan) ಅವರ ಹೆಸರಲ್ಲಿ ನಕಲಿ ಖಾತೆ ಓಪನ್ ಮಾಡಿರುವ ಕಿಡಿಗೇಡಿಗಳು ಸ್ಟಾರ್ ನಟರಿಗೆ ಅವಹೇಳನ ಮಾಡಿ ಪೋಸ್ಟ್ ಮಾಡಿದ್ದಾರೆ.
ಈ ಬೆಳವಣಿಗೆ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆಯ ಒತ್ತಡದಲ್ಲಿರುವ ನಟ ದರ್ಶನ್ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಲು ದರ್ಶನ್ ಅಭಿಮಾನಿಗಳ ಹೆಸರಲ್ಲಿ ವಿರೋಧಿಗಳು ರಮ್ಯಾ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರಾ..? ಎಂಬ ಚರ್ಚೆ ಶುರುವಾಗಿದೆ.
ಸೋಶಿಯಲ್ ಮೀಡಿಯಾ (Social Media) ಯುಗದಲ್ಲಿ ನಕಲಿ ಖಾತೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪೊಲೀಸರು ಇದಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಂಡರೂ ಕಿಡಿಗೇಡಿಗಳ ಆಟಾಟೋಪ ಮಾತ್ರ ನಿಲ್ಲುತ್ತಿಲ್ಲ.
ಇದೀಗ ಕೆಲ ಕಿಡಿಗೇಡಿಗಳು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್. ನಾರಾಯಾಣ್ ಹೆಸರಿನಲ್ಲಿ ನಕಲಿ ಖಾತೆ ಓಪನ್ ಮಾಡಿದ್ದಾರೆ.
ನಿರ್ದೇಶಕ ಎಸ್.ನಾರಾಯಣ್ ಅವರ ಹೆಸರಲ್ಲಿ ನಕಲಿ ಖಾತೆ ಓಪನ್ ಮಾಡಿರುವ ಕಿಡಿಗೇಡಿಗಳು ಸ್ಟಾರ್ ನಟರಿಗೆ ಅವಹೇಳನ ಮಾಡಿ ಪೋಸ್ಟ್ ಮಾಡಿದ್ದಾರೆ. ಈ ಕುರಿತಂತೆ ಎಸ್. ನಾರಾಯಣ್ ಅವರು ಇಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಗೆ ದೂರು ನೀಡಿದ್ದಾರೆ.
ದೂರಿನಲ್ಲಿ ನಿರ್ದೇಶಕ ನಾರಾಯಣ್, S.Narayan@Snarayanofficia ಎಂಬ ನಕಲಿ ಖಾತೆ ಓಪನ್ ಮಾಡುವ ಮೂಲಕ ನನ್ನ ಹೆಸರನ್ನು ದುರುಪಯೋಗಪಡಿಸಿಕೊಂಡು ಅಶ್ಲೀಲ ಸಂದೇಶಗಳು, ಕಾಮೆಂಟ್‌ಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಲಾಗುತ್ತಿದೆ, ಹಂಚಿಕೊಳ್ಳಲಾಗುತ್ತಿದೆ ಮತ್ತು ಫಾರ್ವಡ್ ಮಾಡಲಾಗುತ್ತಿದೆ.
ಅಲ್ಲದೇ ನನ್ನ ಸ್ನೇಹಿತರನ್ನು ಸಂಪರ್ಕಿಸಲಾಗಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರಿಗೆ ಮಾಡಿದ್ದಾರೆ.
ದೂರು ನೀಡಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ ಪುನೀತ್, ಶಿವಣ್ಣ ಹಾಗೂ ಸುದೀಪ್ ಸೇರಿದಂತೆ ಹಲವು ನಟರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಕಳೆದ ಆರೇಳು ತಿಂಗಳಿಂದ ಈ ರೀತಿ ಮೆಸೇಜ್ ಗಳನ್ನು ಮಾಡುತ್ತಿದ್ದಾರೆ. ಈ ವಿಚಾರ ನಾಲ್ಕು ದಿನಗಳ ಹಿಂದೆ ನನ್ನ ಗಮನಕ್ಕೆ ಬಂತು. ಹೀಗಾಗಿ ಕಿಡಿಗೇಡಿಗಳ ವಿರುದ್ಧ ದೂರು ನೀಡಲು ಬಂದಿದ್ದೇನೆ ಎಂದರು.
ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ ಅಸಭ್ಯವಾಗಿ ಮೆಸೇಜ್ ಮಾಡುತ್ತಿರುವುದು ಕಳವಳಕಾರಿಯಾಗಿದೆ. ಎಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆದರೆ ಈ ವಾಕ್ ಸ್ವಾತಂತ್ರ್ಯ ಹೆಸರಿನಲ್ಲಿ ಲಿಮಿಟ್ ಮೀರಿ ಟ್ರೋಲ್ ಮಾಡುತ್ತಿದ್ದಾರೆ. ಇದು ಕನ್ನಡ ಚಿತ್ರರಂಗ ಅಭ್ಯುದಯಕ್ಕೆ ಮಾರಕವಾಗಿದೆ. ನಾನು ಎಲ್ಲಾ ನಟರೊಂದಿಗೆ ಚೆನ್ನಾಗಿದ್ದೇನೆ. ಈ ರೀತಿಯ ಕೆಲಸ ಯಾರು ಮಾಡಿದ್ದಾರೋ ಗೊತ್ತಿಲ್ಲ ಎಂದು ಎಸ್ ನಾರಾಯಣ್ ಹೇಳಿದ್ದಾರೆ.