ರಾಯಚೂರು: ಮಂತ್ರಾಲಯದಲ್ಲಿ (Mantralaya) ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ಸಪ್ತ ರಾತ್ರೋತ್ಸವಕ್ಕೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಭಗವಧ್ವಜಾರೋಹಣ ಮಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.
ಶುಕ್ರವಾರದಿಂದ ಆ.14ರ ವರೆಗೆ ಏಳು ದಿನಗಳ ಕಾಲ ಅದ್ದೂರಿಯಾಗಿ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ನಡೆಯಲಿದೆ.
ಕರ್ನಾಟಕ ಮತ್ತು ತೆಲಂಗಾಣ ಧ್ವಜಾರೋಹಣ ನೆರವೇರಿಸಿದ ಸುಬುಧೇಂದ್ರ ತೀರ್ಥ ಮಠದ ವಿದ್ವಾಂಸರ ಮಂತ್ರ ಘೋಷ ಮಂಗಲ ವಾದ್ಯಗಳೊಂದಿಗೆ ಗೋಪೂಜೆ, ಅಶ್ವಪೂಜೆ, ಧ್ವಜವಂದನೆ, ಧ್ವಜಪೂಜೆ ಹಾಗೂ ಧ್ವಜಾರೋಹಣ ಕಾರ್ಯಕ್ರಮಗಳು ಸಂಪನ್ನಗೊಂಡಿದ್ದು, ದೇಶ ಮತ್ತು ವಿದೇಶಗಳಲ್ಲಿ ರುವ ರಾಘವೇಂದ್ರ ಸ್ವಾಮಿಗಳ ಮಠಗಳು, ಸನ್ನಿಧಾನಗಳಲ್ಲಿ ವೈಭವದಿಂದ ಮಹೋತ್ಸವ ಜರುಗಲಿದೆ ಎಂದರು.
ಆರಾಧನಾ ಶ್ರೀಮಠದಲ್ಲಿ ಆರಾಧನೆ ಮಹೋತ್ಸವ ನಿಮಿತ್ತ ಭಕ್ತರು ತನು, ಮನ,ಧನವನ್ನು ಸ್ವ ಇಚ್ಛೆಯಿಂದ ಅನೇಕ ಬಗೆಯ ರಜತ, ಕನಕ, ಕಟ್ಟಡಗಳ ನಿರ್ಮಾಣ ಸೇರಿ ಅನ್ನದಾನಕ್ಕೆ ಬೇಕಾದ ಧಾನ್ಯ ಗಳನ್ನು ಕಾಣಿಕೆ ರೂಪದಲ್ಲಿ ನೀಡುತ್ತಿದ್ದಾರೆ.
ಕೆನರಾ ಬ್ಯಾಂಕ್‌ನಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ 10 ಲಕ್ಷ ರೂ. ಕಾಣಿಕೆ ನೀಡಿದ್ದಾರೆ. ಶ್ರೀಮಠಕ್ಕೆ ಒಂದು ರುಪಾಯಿಯಿಂದ ಲಕ್ಷ ರುಪಾಯಿ ನೀಡಿದರೂ ಇದನ್ನು ಕಾಣಿಕೆಯಾಗಿ ತೆಗೆದುಕೊಳ್ಳಲಾಗುವುದು ಹೊರತು ದುಡ್ಡು ಎಂದು ಭಾವಿಸುವುದಿಲ್ಲ.
ಶ್ರೀಮಠಕ್ಕೆ ಬರುವ ಎಲ್ಲಾ ಭಕ್ತರನ್ನು ಒಂದೇ ರೀತಿಯಲ್ಲಿ ನೋಡಲಾಗುವುದು. ಎಲ್ಲ ಕಡೆಗಳಲ್ಲಿ ನಡೆಯುವ ರಾಯರ ಆರಾಧನೆಗೆ ಗುರುರಾಯರ ಪೂರ್ಣ ಅನುಗ್ರಹವಿರಲಿದೆ ಎಂದು ಆಶೀರ್ವಚನ ನೀಡಿದರು.