ದೊಡ್ಡಬಳ್ಳಾಪುರ: ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ಡಾ.ವಿಷ್ಣವರ್ಧನ್ (Dr. Vishnavardhan) ಅವರ ಸ್ಮಾರಕವನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದ್ದು, ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ.
2009ರ ಡಿಸೆಂಬರ್ 30ರಂದು ಡಾ.ವಿಷ್ಣುವರ್ಧನ್ ಅವರು ನಿಧನರಾದಾಗ ಕೆಂಗೇರಿ ಬಳಿ ಇರುವ ಅಭಿಮಾನ್ ಸ್ಟುಡಿಯೊದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ಅದೇ ಸ್ಥಳದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡಬೇಕೆಂದು ಅಭಿಮಾನಿಗಳ ಆಸೆಯಾಗಿತ್ತು.
ಅಲ್ಲಿ ಚಿಕ್ಕ ಸ್ಮಾರಕವೂ ನಿರ್ಮಾಣವಾಗಿತ್ತು. ಆದರೆ ಅದು ಹಿರಿಯ ನಟ ಬಾಲಕೃಷ್ಣ ಅವರ ಕುಟುಂಬಕ್ಕೆ ಸೇರಿದ್ದ ಸ್ಥಳವಾಗಿದ್ದು, ಅಲ್ಲಿ ಸ್ಮಾರಕ ನಿರ್ಮಾಣ ಮಾಡಲು ಬಾಲಣ್ಣ ಅವರ ಮಕ್ಕಳು ವಿರೋಧ ವ್ಯಕ್ತಪಡಿಸಿದರು.
ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತು. 16 ವರ್ಷ ನ್ಯಾಯಾಲಯದಲ್ಲಿ ವಾದ-ವಿವಾದ ನಡೆಯಿತು. ಕೊನೆಗೂ ನ್ಯಾಯಾಲಯದಿಂದ ತೀರ್ಪು ಹೊರಬಿದ್ದಿದ್ದು, ಆ ಜಾಗ ಬಾಲಣ್ಣನ ಮಕ್ಕಳ ಪರವಾಗಿದೆ. ಹೀಗಾಗಿ ಅಭಿಮಾನ್ ಸ್ಟುಡಿಯೊದಲ್ಲಿ ನಿರ್ಮಾಣ ಮಾಡಿದ್ದ ಚಿಕ್ಕ ಮಂಟಪವನ್ನು ತೆರವುಗೊಳಿಸಲಾಗಿದೆ.
ಸೋಮವಾರ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆಗೆ ಕರೆ
ರಾತ್ರೋರಾತ್ರಿ ವಿಷ್ಣುವರ್ಧನ್ ಅವರ ಸಮಾಧಿ ತೆರವು ಮಾಡಿರುವ ಕುರಿತಂತೆ ದೊಡ್ಡಬಳ್ಳಾಪುರದಲ್ಲಿ ಆಕ್ರೋಶ ವ್ಯಾಪಕವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ.
ಮುಂದುವರಿದು ಸೋಮವಾರ (ಆ.11) ಡಾ.ವಿಷ್ಣುವರ್ಧನ್ ಸೇನಾ ಸಮಿತಿ ಮತ್ತು ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟದ ವತಿಯಿಂದ ನಗರದ ಡಾ.ವಿಷ್ಣುವರ್ಧನ್ ಪ್ರತಿಮೆ ಮುಂಭಾಗ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಡಾ.ವಿಷ್ಣುವರ್ಧನ್ ಸೇನಾ ಸಮಿತಿ ಸಹಕಾರ್ಯದರ್ಶಿ ರಾಮಾಂಜಿನಪ್ಪ ಕರೆ ನೀಡಿದ್ದಾರೆ.