ದೊಡ್ಡಬಳ್ಳಾಪುರ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ದೊಡ್ಡಬಳ್ಳಾಪುರದ ಮುತ್ತೂರಿನಲ್ಲಿ (Muttur) ಸಂಭವಿಸಿದ ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ.
ಮೃತ ದುರ್ದೈವಿಯನ್ನು ಯೋಗೇಶ್ (15 ವರ್ಷ) ಎಂದು ಗುರುತಿಸಲಾಗಿದೆ.
ಶುಕ್ರವಾರ ಸಂಜೆ 5.30ರ ವೇಳೆಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಗಣೇಶ ವಿಸರ್ಜನೆ ಸಮಯದಲ್ಲಿ ಪಟಾಕಿ ಸ್ಪೋಟದ ಹಿನ್ನೆಲೆಯಲ್ಲಿ 15 ವರ್ಷದ ಮುನಿ (ಧನುಷ್ ರಾವ್) ಎಂಬ ಓರ್ವ ಬಾಲಕ ಮರಣ ಹೊಂದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಯೋಗೇಶ್‌ನನ್ನು ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಸಾವನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೂವರಿಗೆ ಬಂಧನ
ಆಯೋಜಕರಲ್ಲಿ ಮೂವರನ್ನು ದೊಡ್ಡಬಳ್ಳಾಪುರ ನಗರಠಾಣೆ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.
ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಜಾಕೀರ್ ಹುಸೇನ್, ನಾಗರಾಜು, ಪವರ್ ಲಿಫ್ಟ್ ವಾಹನ ಆಪರೇಟರ್ ಮುನಿರಾಜು, ಚೇತನ್, ಗಣೇಶ್, ಲೋಕೇಶ್, ಮುನಿಅಕ್ಕಯ್ಯಮ್ಮ, ಧನಂಜಯ ಸೇರಿ 09 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಪಟಾಕಿ ನಿಷೇಧ
ಮುತ್ತೂರು 2025-26ನೇ ಸಾಲಿನ ಗೌರಿ ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು 1800 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ಸಾರ್ವಜನಿಕ ಹಿತದೃಷ್ಟಿ ಹಾಗೂ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಗಣೇಶ ಪ್ರತಿಷ್ಠಾಪನೆ ಸಮಯದಲ್ಲಾಗಲೀ, ಗಣೇಶ ವಿಸರ್ಜನಾ ಸಮಯದಲ್ಲಾಗಲೀ, ಮೆರವಣಿಗೆಯ ಸಂದರ್ಭದಲ್ಲಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವ ಸ್ಥಳಗಳಲ್ಲಾಗಲೀ ಮತ್ತು ಯಾವುದೇ ರಾಜಕೀಯ ಹಾಗೂ ಧಾರ್ಮಿಕ ಸಮಾವೇಶ ಕಾರ್ಯಕ್ರಮಗಳಲ್ಲಾಗಲೀ ಪಟಾಕಿ, ಸಿಡಿಮದ್ದು ಮತ್ತು ಇನ್ನಿತರೆ ಸ್ಫೋಟಕ ವಸ್ತುಗಳನ್ನು ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶಿಸಿದ್ದಾರೆ.