ಬೆಂಗಳೂರು: ಹಿರಿಯ ನಟಿ ಭಾರತಿ ವಿಷ್ಣುವರ್ಧನ್ (Bharathi Vishnuvardhan) ಮತ್ತು ಅನಿರುದ್ ವಿಷ್ಣುವರ್ಧನ್ (Anirudh Vishnuvardhan) ಅವರು ಕಾವೇರಿ ನಿವಾಸದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ವೇಳಸ ವಿಷ್ಣು ಸ್ಮಾರಕ ನಿರ್ಮಾಣಕ್ಕೆ 10 ಗುಂಟೆ ಮೀಸಲಿಡಬೇಕು, ವಿಷ್ಣು ಹುಟ್ಟು ಹಬ್ಬದ ಒಳಗೆ ಸರ್ಕಾರ ಭೂಮಿಗೆ ಅನುಮತಿಸಬೇಕು. ವಿಷ್ಣುವರ್ಧನ್ ಅವರಿಗೆ ʼಕರ್ನಾಟಕ ರತ್ನʼ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅನಿರುದ್ ವಿಷ್ಣುವರ್ಧನ್, ಎರಡು ವಿಚಾರಗಳ ಹಿನ್ನೆಲೆಯಲ್ಲಿ ಇಂದು ಸಿಎಂ ಅವರನ್ನು ಭೇಟಿ ಮಾಡಲಾಯಿತು.
ಮೊದಲನೆಯದಾಗಿ ಸೆ.18 ರ ಒಳಗಾಗಿ ಅಭಿಮಾನ್ ಸ್ಟುಡಿಯೋದಲ್ಲಿನ 10 ಗುಂಟೆ ಜಮೀನಿನಲ್ಲಿ ಅಭಿಮಾನಿಗಳು ವಿಷ್ಣುವರ್ಧನ್ ಅವರಿಗೆ ಪೂಜೆ, ನಮನ ಸಲ್ಲಿಸಲು ಮಂಟಪ ನಿರ್ಮಾಣಕ್ಕೆ ನೀಡುವಂತೆ ಮನವಿ ಮಾಡಿದ್ದೇವೆ. ಆದರೆ ಮುಂದೆ ಕಾನೂನಾತ್ಮಕ ತೊಂದರೆ ಎದುರಾಗಬಾರದು ಎಂದು ಸ್ವಲ್ಪ ವಿಳಂಬ ಆಗಬಹುದು. ಆದರೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಎರಡನೇಯದು ವಿಷ್ಣುವರ್ಧನ್ ಅವರಿಗೆ ಮರಣೋತ್ತರ ʼಕರ್ನಾಟಕ ರತ್ನʼ ಕೊಡಬೇಕು ಎಂದು ಮನವಿ ಮಾಡಿದ್ದೇವೆ. ನಾಳೆ ನಡೆಯಲಿರುವ ಸಚಿವ ಸಂಪುಟದಲ್ಲಿ ಈ ವಿಷಯ ಪ್ರಸ್ತಾಪಕವಾಗಲಿದ್ದು, ಬಹುಶ ನಾಳೆಯೇ ವಿಷ್ಣುವರ್ಧನ್ ಅವರಿಗೆ ‘ಕರ್ನಾಟಕ ರತ್ನ’ ನೀಡುವ ಕುರಿತು ಘೋಷಣೆಯಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.