ಬೆಂಗಳೂರು: ಸೈಬರ್ ಕ್ರೈಂ ತಡೆಯಲು ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸೈಬರ್ ಕಮಾಂಡ್ (command center) ಸೆಂಟರ್ ಆರಂಭವಾಗಿದೆ.
ರಾಜ್ಯದಲ್ಲಿ ಪ್ರಸ್ತುತ 15 ಸಾವಿರಕ್ಕೂ ಹೆಚ್ಚು ಪ್ರಕರಣ ಇತ್ಯರ್ಥ ಆಗದೆ ಬಾಕಿ ಉಳಿದಿದೆ. ಅಲ್ಲದೇ ಇಷ್ಟು ದಿನ ಪೊಲೀಸರು ಕಾನೂನು ಸುವ್ಯವಸ್ಥೆ ಜೊತೆಗೆ ಸೈಬರ್ ಪ್ರಕರಣಗಳ ತನಿಖೆಯನ್ನೂ ಮಾಡಬೇಕಿತ್ತು. ಆಗ ಪೊಲೀಸರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿ, ಸರಿಯಾದ ರೀತಿಯಲ್ಲಿ ಪ್ರಕರಣ ಬಗೆಹರಿಸಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಸೈಬರ್ ಕಮಾಂಡ್ ಸೆಂಟರ್ ರಚನೆ ಆದ ಮೇಲೆ ಕೇವಲ ಸೈಬರ್ ಪ್ರಕರಣಗಳ ನಿರ್ವಹಣೆಗೆ ಸಿಬ್ಬಂದಿ ನೇಮಕ ಮಾಡಲಾಗುತ್ತದೆ.
ಅಲ್ಲದೆ ತಾಂತ್ರಿಕ ಪರಿಣತಿ ಹೊಂದಿರುವ ಸಿಬ್ಬಂದಿಗಳನ್ನು ಇಲ್ಲಿ ನೇಮಕ ಮಾಡಿಕೊಳ್ಳಲಾಗುತ್ತೆ. ಸಿಬ್ಬಂದಿಗಳಿಗೆ ಉತ್ತಮ ಟ್ರೈನಿಂಗ್ ನೀಡಲಾಗುತ್ತದೆ. ದೇಶದ ಯಾವುದೇ ಭಾಗದಿಂದ ವಂಚನೆ ನಡೆದರೂ ಪತ್ತೆ ಮಾಡಿ ಕ್ರಮ ಜರುಗಿಸಲು ಸೈಬರ್ ಕಮಾಂಡ್ ಸೆಂಟರ್ ಮುಂದಾಗಲಿದೆ.
ಸದ್ಯ ಬೆಂಗಳೂರಲ್ಲಿ 45 ಸೈಬರ್ ಪೊಲೀಸ್ ಠಾಣೆಗಳಿವೆ. ಜೊತೆಗೆ ಸಹಾಯವಾಣಿ 1930ರ ಕೂಡ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ.
ಇನ್ನು ಮುಂದೆ ಸೈಬರ್ ಠಾಣೆಗಳು ಮತ್ತು 1930ರಲ್ಲಿ ದಾಖಲಾದ ದೂರುಗಳನ್ನು ಸೈಬರ್ ಕಮಾಂಡ್ ಸೆಂಟರ್ ನಿರ್ವಹಣೆ ಮಾಡಲಿದೆ. ದೂರು ದಾಖಲಿಸುವುದರ ಜೊತೆಗೆ ತನಿಖಾ ವರದಿಯನ್ನ ಕೂಡ ಸಲ್ಲಿಕೆ ಮಾಡಲಿದೆ.