
ದುಬೈ: ಭಾರತೀಯ ಯೋಧರು ಮತ್ತು ಇತರೆ ವಲಯಗಳಿಂದ ಪಾಕಿಸ್ತಾನದ ವಿರುದ್ದ ಏಷ್ಯಾ ಕಪ್ (Asia Cup) ಟಿ20 ಪಂದ್ಯ ಬಹಿಷ್ಕರಿಸಿ ಎಂಬ ಒತ್ತಾಯಕ್ಕೆ ಯಾವುದೇ ಬೆಲೆ ನೀಡದೆ ಭಾನುವಾರ ಇಲ್ಲಿ ಭಾರತ- ಪಾಕಿಸ್ತಾನ ನಡುವೆ ಪಂದ್ಯ ನಡೆಯಿತು.
ಪಾಕಿಸ್ತಾನ ತಂಡವನ್ನು ಎಲ್ಲ ವಿಭಾಗಗಳಲ್ಲೂ ಹಣಿದ ಭಾರತ 7 ವಿಕೆಟ್ ಗಳಿಂದ ಜಯ ಸಾಧಿಸಿತು. ಈ ವರ್ಷ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲೂ ಪಾಕಿಸ್ತಾ ನದ ವಿರುದ್ಧ ಭಾರತ ಗೆದ್ದಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ಅಲ್ಲೇ ಎಡವಿತು. ಆರಂಭದಿಂದಲೇ ಕುಸಿಯತೊಡಗಿದ ಅದು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 127 ರನ್ ಗಳಿಸಿತು. ಇದನ್ನು ಹಿಂಬಾಲಿಸಿ ಹೊರಟ ಭಾರತ 15.5 ಓವರ್‌ಗಳಲ್ಲಿ 3 ವಿಕೆಟ್‌ಗೆ 131 ರನ್ ಗಳಿಸಿತು. ಇನ್ನೂ 25 ಎಸೆತಗಳು ಬಾಕಿಯಿರುವಂತೆಯೇ ಗೆಲುವು ಸಾಧಿಸಿತು.
ತಂಡದ ಪರ ಆರಂಭಿಕ ಅಭಿಷೇಕ್ ಶರ್ಮಾ ಸ್ಪೋಟಕವಾಗಿ ಬ್ಯಾಟ್ ಮಾಡಿ ಬರೀ 13 ಎಸೆತಗಳಲ್ಲಿ 31 ರನ್ ಚಚ್ಚಿದರು. ನಾಯಕ ಸೂರ್ಯಕುಮಾರ್ ಯಾದವ್ 37 ಎಸೆತಗಳಲ್ಲಿ ಅಜೇಯ 47 ರನ್ ಗಳಿಸಿದರು. ಕಡೆಯಲ್ಲಿ ತಿಲಕ್ ವರ್ಮಾ 31 ರನ್ ಬಾರಿಸಿದರು.
ಹಸ್ತಲಾಘವಕ್ಕೆ ಉಭಯ ನಾಯಕರ ನಿರಾಕರಣೆ
ಭಾನುವಾರದ ಟಾಸ್‌ಗೂ ಮುನ್ನ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಪಾಕ್ ನಾಯಕ ಸಲ್ಮಾನ್ ಅಲಿ ಆಘಾ ಹಸ್ತಲಾಘವ ನಿರಾಕರಿಸಿದರು. ಟೂರ್ನಿ ಆರಂಭಕ್ಕೂ ಮುನ್ನ ನಡೆದಿದ್ದ ನಾಯಕರ ಸುದ್ದಿಗೋಷ್ಠಿಯಲ್ಲಿಯೂ ಇವರಿಬ್ಬರು ಹಸ್ತಲಾಘವ ಮಾಡಿರಲಿಲ್ಲ. ಇದೀಗ ಆನ್‌ಫೀಲ್ಡ್‌ನಲ್ಲಿಯೂ ಉಭಯ ನಾಯಕರ ಈ ಸಮರ ಮುಂದುವರಿಯಿತು. ಪಹಲ್ಗಾಮ್ ಉಗ್ರರ ದಾಳಿ ಮತ್ತು ಆಪರೇಶನ್ ಸಿಂದೂರದ ಬಳಿಕ ಇತ್ತಂಡಗಳ ನಡುವೆ ನಡೆಯುತ್ತಿರುವ ಮೊದಲ ಪಂದ್ಯವಾಗಿದೆ. ಪಂದ್ಯವನ್ನು ಬಹಿಷ್ಕರಿಸಿ ಎಂಬ ಕೂಗಿನ ಹಿನ್ನೆಲೆಯಲ್ಲಿ ಪಂದ್ಯ ಮಹತ್ವ ಪಡೆದಿತ್ತು.
ಬಿಜೆಪಿ-ಕಾಂಗ್ರೆಸ್‌ನ ಹಲವು ನಾಯಕರಿಂದ ವಿರೋಧ
ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಪಂದ್ಯ ನಾಡುತ್ತಿರುವುದು ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಪಹಲ್ಲಾಮ್ ಘಟನೆಯ ಬಳಿಕ ಪಾಕಿಸ್ತಾನ ದೊಂದಿಗೆ ಎಲ್ಲ ರೀತಿಯ ಸಂಬಂಧಕ್ಕೆ ಬ್ರೇಕ್ ಹಾಕಲಾಗಿದೆ. ಈ ಮಧ್ಯೆ ಪಾಕಿಸ್ತಾನ ಮತ್ತು ಭಾರತದ ನಡುವಿನ ವಿಷ್ಯಾ ಕಪ್ ಕ್ರಿಕೆಟ್ ಪಂದ್ಯವಾಡಲು ಅವಕಾಶ ನೀಡಿದ್ದಕ್ಕಾಗಿ ದೇಶದಲ್ಲಿ ವಿರೋಧ ವ್ಯಕ್ತವಾಗಿದೆ.
ಬಿಜೆಪಿ ನಾಯಕರು ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಸರಕಾರದ ವಿರುದ್ದ ಪ್ರತಿಪಕ್ಷನಾಯಕರು ಕಿಡಿಕಾರುತ್ತಿದ್ದಾರೆ. ವಿಶ್ವ ಗುರು ಎಂದು ಬೇರೆ ಯುದ್ಧ ನಿಲ್ಲಿಸುವ ತಾಕತ್ತು ಇರುವ ಪ್ರಧಾನಿ ಮೋದಿಯವರಿಗೆ ಇಂಡೋ ಪಾಕ್ ಮಧ್ಯದ ಪಂದ್ಯ ನಿಲ್ಲಿಸಲು ಆಗೋಲ್ವ ಎಂದು ಲೇವಡಿ ಮಾಡುತ್ತಿದ್ದಾರೆ. ಬಾಯ್ಕಾಟ್ ಇಂಡಿಯಾ ವರ್ಸಸ್ ಪಾಕಿಸ್ತಾನ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಅಭಿಯಾನ ಶುರು ಆಗಿದೆ.
ಪಾಕಿಸ್ತಾನ ವಿರುದ್ಧ ಆಡುತ್ತಿರುವುದಕ್ಕೆ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿ ನೇತೃತ್ವ ದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಹಿಳಾ ಘಟಕದ ಕಾರ್ಯಕರ್ತೆಯರು ಸಿಂದೂರ ಹಾಗೂ ಕ್ಯಾಂಡೆಲ್ ಹಿಡಿದು ಪ್ರತಿಭಟನೆ ನಡೆಸಿದರು. ಆದರೆ ಈ ವೇಳೆ ಬಿಜೆಪಿ ಬೆಂಬಲಿತರೆನ್ನಲಾದ ಯುವಕರು, ಪ್ರತಿಭಟನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						