ಧಾರವಾಡ: ಪೊಲೀಸ್ (Police) ವ್ಯವಸ್ಥೆಗೆ ಸೇರುವ ಪ್ರತಿ ಸಿಬ್ಬಂದಿ ಸಾರ್ವಜನಿಕ ಸೇವಕರಾಗಬೇಕು. ಪೀಡಕರಾಗಬಾರದು. ಸಾರ್ವಜನಿಕರಿಗೆ ಜನಸ್ನೇಹಿಯಾಗಿ, ಜನಪರವಾಗಿ ತಮ್ಮ ವೃತ್ತಿ ನಿರ್ವಹಿಸಿ, ಯಶಸ್ವಿಯಾಗಬೇಕು ಎಂದು ರಾಜ್ಯ ಪೊಲೀಸ್ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಆಲೋಕ್ ಕುಮಾರ್ (Alok Kumar) ಹೇಳಿದರು.
ಅವರು ಇಂದು ಬೆಳಿಗ್ಗೆ ಕಲಘಗಿ ರಸ್ತೆಯ ಗಿರಿನಗರದಲ್ಲಿರುವ ಪೊಲೀಸ್ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಜರುಗಿದ 2ನೇ ತಂಡದ ಸಶಸ್ತ್ರ ಪೊಲೀಸ್ ಕಾನ್ಸ್‍ಟೆಬಲ್‍ಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು.

ತರಬೇತಿ ಗುಣಮಟ್ಟದ ಮೇಲೆ ಪೊಲೀಸ್ ಪೇದೆಗಳ ಸೇವೆಯ ಸಾಮಥ್ರ್ಯ ಅವಲಂಬಿಸಿರುತ್ತದೆ. ಕಳಪೆಗುಣಮಟ್ಟದ ತರಬೇತಿ ನೀಡಿದರೆ ಉತ್ತಮವಾದ ಬದ್ಧತೆಯ ಕರ್ತವ್ಯ ನಿರೀಕ್ಷೆ ಮಾಡುವುದು ಅಸಾಧ್ಯ ಎಂದು ಅವರು ಹೇಳಿದರು.
ಅಧಿಕಾರಿ ಹಂತದ ಪೊಲೀಸ್‌ರಿಗೆ ಇಲಾಖೆಯ ತರಬೇತಿಗಳು ಕೇಂದ್ರಿಕೃತವಾಗಿವೆ. ಪೊಲೀಸ್ ಪೇದೆಗಳಿಗೆ ಉತ್ತಮವಾದ ತರಬೇತಿ ನೀಡಿದರೆ, ಪೊಲೀಸ್ ವ್ಯವಸ್ಥೆ ಬಲವಾಗುತ್ತದೆ. ತರಬೇತಿಯಲ್ಲಿ ಪಠ್ಯಕ್ರಮ, ಪ್ರಾಯೋಗಿಕ ತರಬೇತಿ, ದೈಹಿಕ ತರಬೇತಿ ಅಳವಡಿಸಲಾಗಿದೆ. ಈಗ ತರಬೇತಿಯಲ್ಲಿ ಆಮೂಲಾಗ್ರ ಪರಿವರ್ತನೆ ತರಲಾಗಿದೆ ಎಂದು ಅವರು ಹೇಳಿದರು.
ಪೊಲೀಸ್ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದು, ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಬೇಕು. ಯಾವುದೇ ಅಕ್ರಮಗಳಲ್ಲಿ, ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿ ಆಗಬಾರದು. ಅಪರಾಧಿಗಳಿಂದ ದೂರವಿದ್ದು, ಶಿಷ್ಟರನ್ನು ರಕ್ಷಿಸಬೇಕು. ಕಾನೂನು ಪಾಲನೆ ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಅವರು ತಿಳಿಸಿದರು.
ಮುಂದಿನ ಐದು ವರ್ಷದಲ್ಲಿ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿ ಆಗುವದಿಲ್ಲ ಎಂಬ ವಾರಂಟಿ ನೀಡಬೇಕು. ಪ್ರತಿಜ್ಞಾ ವಿಧಿ ಸ್ವೀಕರಿಸಿಯೂ ಓಥ್ ಬ್ರಿಚ್ ಮಾಡಿದರೆ, ಅಂತವರ ವಿರುದ್ಧ ಚಾರ್ಜ್ ಮಾಡಿ ಕೇಸ್ ದಾಖಲಿಸಬೇಕು. ಈ ಕುರಿತು ತರಬೇತಿ ಶಾಲೆಯ ಮುಖ್ಯಸ್ಥರು ಲಿಖಿತವಾಗಿ ಹೇಳಿಕೆ ಪಡೆದು, ಪ್ರಶಿಕ್ಷಣಾರ್ಥಿಗಳು ಸೇವೆಗೆ ಸೇರುವ ಪೊಲೀಸ್ ಠಾಣೆಗಳಿಗೆ ಕಳುಹಿಸಬೇಕು. ಇದರಿಂದ ಅವರಿಗೆ ಎಚ್ಚರಿಕೆ ಇರುತ್ತದೆ ಎಂದು ಅವರು ಸಲಹೆ ನೀಡಿದರು.
ಉತ್ತಮ ಸೇವೆಯ ಭರವಸೆ ನೀಡಿ, ನಾಳೆಯಿಂದ ಸೇವೆಗೆ ಸೇರಬೇಕು ಎಂದು ಅವರು ತಿಳಿಸಿದರು.
ಪೊಲೀಸ್ ವ್ಯವಸ್ಥೆಯಿಂದ ಸಮಾಜಕ್ಕೆ, ಸಾರ್ವಜನಿಕರಿಗೆ ರಕ್ಷಣೆಯ ಬಲವಾದ ಭರವಸೆ ಇದೆ. ಪೊಲೀಸ್ ಇರುವುದು ಸಾರ್ವಜನಿಕರ ರಕ್ಷಣೆಗಾಗಿ, ಸಾರ್ವಜನಿಕ ಆಸ್ತಿಪಾಸ್ತಿ, ಜೀವ ರಕ್ಷಣೆಗಾಗಿ ನಮ್ಮ ಕರ್ತವ್ಯವಿರಬೇಕು. ಬಡವರ, ಮಹಿಳೆಯರ, ಅಸಹಾಯಕರ, ಮಕ್ಕಳ ರಕ್ಷಣೆ ಮಾಡಬೇಕು ಎಂದರು.
ಯಾವುದೇ ಸಂದರ್ಭದಲ್ಲಿ ಬಂದೋಬಸ್ತ ಸ್ಥಳದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯ ಬಲ ಪ್ರಯೋಗ ಮಾಡಬಾರದು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ಅವರು ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಹೊಂದಾಣಿಕೆ ಇರಬೇಕು. ಬರುವ ಸಂದಿಗ್ಧ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಿ, ಸಮಾಜದಲ್ಲಿ ಮಾದರಿ ಆಗಿ ನಿಲ್ಲಬೇಕು ಎಂದರು. ಆರೋಗ್ಯವು ಮುಖ್ಯ. ಪ್ರತಿಯೊಬ್ಬರು ಮಾನಸಿಕ ಮತ್ತು ಶಾರೀರಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರತಿದಿನ ಕನಿಷ್ಠ 45 ನಿಮಿಷ ವ್ಯಾಯಾಮ, ಯೋಗ ಮಾಡಬೇಕು ಎಂದರು.
ಎಲ್ಲ ಪೊಲೀಸ್ ಸಿಬ್ಬಂದಿಗಳು ಜನಪರ, ಜನಸ್ನೇಹಿ ಪೊಲೀಸ್ ಆಗಬೇಕು. ತರಬೇತಿಯಲ್ಲಿ ನೀಡಿರುವ ಗುಣಮಟ್ಟದ ಅಂಶಗಳನ್ನು, ನೀತಿಗಳನ್ನು ವೃತ್ತಿ ಜೀವನದಲ್ಲಿ ಅಳವಡಿಸಕೊಳ್ಳಬೇಕೆಂದು ಅವರು ಹೇಳಿದರು.
ಧಾರವಾಡ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಪೊಲೀಸ್ ಅಧೀಕ್ಷಕ ಎಂ.ಎಂ.ಯಾದವಾಡ ಅವರು ಸ್ವಾಗತಿಸಿ, ತರಬೇತಿ ಶಾಲೆಯ ವರದಿ ವಾಚನ ಮಾಡಿದರು.
ವೇದಿಕೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಮಹಾನಗರ ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾಂವಿ ಸೇರಿದಂತೆ ಪೆÇಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ಇದ್ದರು.
ತರಬೇತಿಯಲ್ಲಿ ಒಳಾಂಗಣ ಕ್ರೀಡೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಸಾಧಕ ಪ್ರಶಿಕ್ಷಣಾರ್ಥಿ ಪೊಲೀಸ್ ಕಾನ್ಸ್‍ಟೇಬಲ್‍ಗಳಾದ ಶ್ರೀನಿವಾಸ ಪಾಟೀಲ ಪ್ರಥಮ ಸ್ಥಾನ, ಅಜರ್ ಮೈಮೂದ್ ದ್ವಿತೀಯ ಸ್ಥಾನ, ಹನುಮಂತರಾಯ ತೃತೀಯ ಸ್ಥಾನವನ್ನು ಮತ್ತು ಹೊರಾಂಗಣ ಕ್ರೀಡೆಗಳಲ್ಲಿ ಪ್ರಶಿಕ್ಷಣಾರ್ಥಿಗಳಾದ ರಾಜಬಕ್ಷಿ ಪಿಂಜಾರ ಪ್ರಥಮ ಸ್ಥಾನ, ಸಂತೋಷ ಬಿರಾದಾರ ದ್ವಿತೀಯ ಸ್ಥಾನ, ನಿತೀನ್ ವೈ. ತೃತೀಯ ಸ್ಥಾನವನ್ನು ಮತ್ತು ಪೈರಿಂಗ್ ವಿಭಾಗದಲ್ಲಿ ಉಮೇಶ ಸಿದ್ದಪ್ಪ ಪೂಜೇರಿ ಪ್ರಥಮ ಸ್ಥಾನ, ನಾಗಲಿಂಗ ಕುರಿ ದ್ವಿತೀಯ ಸ್ಥಾನ ಮತ್ತು ಶಶಿಭೂಷಣ ಎಂ.ಬಿ. ತೃತೀಯ ಸ್ಥಾನವನ್ನು ಪಡೆದಿದ್ದಾರೆ. ವಿಜೇತರನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅಲೋಕ್ ಕುಮಾರ್ ಅವರು ಬಹುಮಾನ ವಿತರಿಸಿ, ಅಭಿನಂದಿಸಿದರು.
ಸರ್ವೋತ್ತಮ ಪ್ರಶಸ್ತಿ ಶ್ರೀಶೈಲ ಚಿನಗುಂಡಿ ಅವರು ಪಡೆದರು. ನಂತರ ಸ್ಪೂರ್ಥಿ ಸ್ಮರಣಸಂಚಿಕೆ ಬಿಡುಗಡೆ ಕಾರ್ಯಕ್ರಮ ನೇರವೇರಿತು.
ಸಿಪಿಐ ರಮೇಶ ಗೋಕಾಕ ಅವರು ವಂದಿಸಿದರು. ಆಕಾಶವಾಣಿ ಹಿರಿಯ ಉದ್ಘೋಷಕಿ ಮಾಯಾ ರಾಮನ್ ಅವರು ಹಾಗೂ ಮಹಾಂತೇಶ ಸಣ್ಣಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳ ಪಾಲಕರು, ಸಾರ್ವಜನಿಕರು ಭಾಗವಹಿಸಿದ್ದರು.