ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಜೀವನಾಡಿಯಾದ ನೇಯ್ಗೆ ಉದ್ಯಮಕ್ಕೆ ಆಸರೆಯಾಗಿರುವ ರೇಷ್ಮೆ ಮತ್ತು ಕೃತಕ ರೇಷ್ಮೆಗೆ ಬಣ್ಣ ಹಚ್ಚುವ ಘಟಕಗಳ ಮತ್ತು ಮಾಲೀಕರ ಮೇಲೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿರುವುದು ಖಂಡನೀಯವಾಗಿದ್ದು, ಇದರ ವಿರುದ್ದ ಸೆ.17ರಂದು ಬೆಳಿಗ್ಗೆ 10.30ಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಛೇರಿ ಮುಂದೆ ಪ್ರತಿಭಟನೆ (Protest) ನಡೆಸಲಾಗುವುದು ಎಂದು ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು (B.G. Hemant Raj) ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಮಾಲಿನ್ಯ ನಿಯಂತ್ರಣ ಮಂಡಲಿಯ ಅಧಿಕಾರಿಗಳು ಕಳೆದ ನಾಲ್ಕು ವರ್ಷಗಳಿಂದ ಬಣ್ಣದ ಘಟಕಗಳ ಮೇಲೆ ಮತ್ತು ಮಾಲಿಕರಿಗೆ ಪದೇ ಪದೇ ನೋಟೀಸ್ ನೀಡುವ ಮತ್ತು ಖುದ್ದಾಗಿ ಬಂದು ಅವರಿಗೆ ಘಟಕಗಳನ್ನು ಮುಚ್ಚಬೇಕೆಂದು ತೊಂದರೆ ನೀಡುತ್ತಿದ್ದಾರೆ.
ಇತ್ತೀಚೆಗಷ್ಟೇ ನಗರದ ಹೊರವಲಯದಲ್ಲಿ ಲಿಂಗರಾಜು ಎಂಬುವವರ ಬಣ್ಣದ ಘಟಕದಲ್ಲಿ ನಿಯಮಗಳನ್ನು ಪಾಲಿಸುತ್ತಿದ್ದರೂ ಜಾಗದ ಮಾಲಿಕರಿಗೆ ಅನಾವಶಕವಾಗಿ ಭಯ ಇಡಿಸಿ ಅವರಿಂದ ಬಣ್ಣ ಮಾಡುವ ಉಪಕರಣಗಳು ಮತ್ತು ಒಲೆಗಳನ್ನು ಜೆ.ಸಿ.ಬಿ.ಮೂಲಕ ಧ್ವಂಸ ಮಾಡಿಸಿರುವ ಘಟನೆ ನಡೆದಿದೆ.
ಬಣ್ಣದ ಘಟಕದ ಮಾಲೀಕರು ನಿಯಮವಾಗಿ ನಡೆದುಕೊಂಡರೂ ಸಹ ಮಾಲಿನ್ಯ ನಿಯಂತ್ರಣ ಮಂಡಲಿಯ ಅಧಿಕಾರಿಗಳು ಯಾರೋ ಕೆಲವರ ಮಾತುಗಳನ್ನು ಕೇಳಿಕೊಂಡು ಘಟಕದ ಮಾಲಿಕರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಸರಿಯಲ್ಲ. ಕೈಗಾರಿಕಾ ಪ್ರದೇಶದಲ್ಲಿನ ನೂರಾರು ಕಾರ್ಖಾನೆಗಳು ಪರಿಸರ ಮಾಲಿನ್ಯ ಮಾಡುತ್ತಿರುವುದಕ್ಕೆ ಸರಿಯಾದ ಕ್ರಮ ಕೈಗೊಳ್ಳದ ಮಾಲಿನ್ಯ ನಿಯಂತ್ರಣ ಮಂಡಲಿಯು ಕೆಲವು ಭಡಪಾಯಿಗಳ ಜೀವನಕ್ಕೋಸ್ಕರ ಸಣ್ಣ ಪ್ರಮಾಣದಲ್ಲಿ ಉದ್ಯೋಗ ಮಾಡಿಕೊಂಡು ಜೀವನ ನಡೆಸುತ್ತಿರುವವರ ಮೇಲೆ ಈ ರೀತಿ ದಬ್ಬಾಳಿಕೆ ನಡೆಸುವುದು ಎಷ್ಟು ಸರಿ.
ಅಧಿಕಾರಿಗಳ ಈ ಕ್ರಮ ಖಂಡಿಸಿ ನಗರದ ಟಿ.ಬಿ ವೃತ್ತದಲ್ಲಿರುವ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಛೇರಿ ಮುಂದೆ ಸೆ.17ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. (ಸಂಗ್ರಹ ಚಿತ್ರ ಬಳಸಲಾಗಿದೆ)