ದೊಡ್ಡಬಳ್ಳಾಪುರ (Doddaballapur): ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದರೊಂದಿಗೆ ಬದ್ದತೆಯಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ನಾವು ಬದುಕಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದ್ದು, ಮಹಿಳೆಯರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಿದೆ ಎಂದು ಸ್ತ್ರೀ ರೋಗ ತಜ್ಞೆ ಡಾ.ಶಾಲಿನಿ ಹೇಳಿದರು.

ನಗರದ ಅಪೇರಲ್ ಪಾರ್ಕ್ ಸಮೀಪದಲ್ಲಿರುವ ಶ್ರೀ ರಾಮ ಸಮೂಹ ಶಿಕ್ಷಣ ಸಂಸ್ಥೆಯ ಸೂರ್ಯ ಪದವಿ ಪೂರ್ವ ಕಾಲೇಜು, ಶ್ರೀ ರಾಮ ನರ್ಸಿಂಗ್ ಕಾಲೇಜು ಸಹಯೋಗದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳಾ ಸಬಲೀಕರಣ, ಮಹಿಳಾ ಸಶಕ್ತೀಕರಣದ ಧ್ಯೇಯ ಹಾಗೂ ಲಿಂಗ ಅಸಮಾನತೆಯ ವಿರುದ್ದ ದನಿ ಎತ್ತುವ ನಿಟ್ಟಿನಲ್ಲಿ ಮಹಿಳಾ ದಿನಾಚರಣೆ ಪ್ರಮುಖ ಪಾತ್ರ ವಹಿಸಲಿದೆ. ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಬರುತ್ತಿರುವುದು ಸಂತಸದ ಸಂಗತಿಯಾಗಿದೆ. ಇದಕ್ಕೆ ಕುಟುಂಬ ಹಾಗೂ ಸಮುದಾಯದ ಸಹಕಾರ ಬೇಕು.
ಮಹಿಳೆ ತನ್ನಲ್ಲಿರುವ ಅಂತರ್ ಶಕ್ತಿಯನ್ನು ಹೊರ ತಂದಾಗ ಮಾತ್ರ ಸಬಲರಾಗಲು ಸಾಧ್ಯ. ಪ್ರಾಪ್ತ ವಯಸ್ಸಿಗೆ ಬಂದು ಯುವತಿಯರು ಸ್ವತಂತ್ರ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮಥ್ಯ್ಯ ಪಡೆದಿರುತ್ತಾರೆ. ಆದರೆ ಇದಕ್ಕೆ ತಕ್ಕೆ ಅರ್ಹತೆ ಪಡೆದುಕೊಳ್ಳಬೇಕು. ಜಂಕ್ ಫುಡ್ಗಳ ಆಹಾರ ಸೇವನೆ ನಮ್ಮ ಆರೋಗ್ಯಕ್ಕೆ ಹಾನಿಕರವಾಗಿದ್ದು, ಆರೋಗ್ಯಕ್ಕೆ ಮಹಿಳೆಯರು ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
150 ರೂ ಸಂಬಳ ಪಡೆದು ಸೇವಾ ಸಂಸ್ಥೆಯಲ್ಲಿ ಕೆಲಸ
ಪ್ರಗತಿಪರ ರೈತ ಮಹಿಳೆ ಬಿ.ಮಂಜುಳ ಮಾತನಾಡಿ, ಬದುಕಿನಲ್ಲಿ ಕಷ್ಟಗಳು ಬರುವುದು ಸಹಜ. ಆ ಅದಕ್ಕೆ ಧೃತಿಗೆಡಬಾರದು. ದಶಕಗಳ ಹಿಂದೆ ಗ್ರಾಮೀಣ ಹೆಣ್ಣು ಮಕ್ಕಳಿಗೆ ಶಿಕ್ಷಣ ಎನ್ನವುದು ಮರೀಚಿಕೆಯಾಗಿತ್ತು. ಆದರೆ ಈಗ ಕಾಲ ಬದಲಾಗಿದೆ ಎಂದು ತಾವು ಎಸ್.ಎಸ್.ಎಲ್.ಸಿ ನಂತರದ ದಿನಗಳಲ್ಲಿ ಕಷ್ಟಪಟ್ಟು ಕೃಷಿ ಮಾಡಿದೆ. 150 ರೂ ಸಂಬಳ ಪಡೆದು ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡಿದೆ.
ಪ್ರಗತಿಪರ ಕೃಷಿ ಮಹಿಳೆ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದಿವೆ. ಇದಕ್ಕೆ ಆತ್ಮ ವಿಶ್ವಾಸವೇ ನನಗೆ ಆಸರೆಯಾಯಿತು. ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಆದ್ಯತೆ ನೀಡಿದರೆ, ಬದುಕಿನಲ್ಲಿ ಬರುವ ಸಂಕಷ್ಟಗಳನ್ನು ಎದುರಿಸಲು ಸಾಧ್ಯ ಎಂದರು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್ ಮಾತನಾಡಿ, ರಾಜಕೀಯ ಕ್ಷೇತ್ರ ನನಗೆ ಹೊಸತಾದರೂ ಇಲ್ಲಿ ಬಂದು ಒಂದಿಷ್ಟು ಸೇವೆ ಮಾಡಿದ್ದೇನೆ. ಮಹಿಳೆಯರು ಯಾವುದೇ ಕಾರ್ಯ ನಿರ್ವಹಿಸಬಲ್ಲರು ಎನ್ನುವುದನ್ನು ಸಮಾಜಕ್ಕೆ ತೋರಿಸಬೇಕಿದೆ ಎಂದರು.
ಶ್ರೀ ರಾಮ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ.ಮಾಲಾ ವಿಜಯಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರಿಗಾಗುತ್ತಿದ್ದ ತಾರತಮ್ಯ, ಶೋಷಣೆಗಳ ವಿರುದ್ದ ದನಿ ಎತ್ತಿದ ಪ್ರತೀಕವಾಗಿ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದ್ದು, ಇದರ ಹಿನ್ನೆಲೆ ಅರಿಯಬೇಕಿದೆ.
ಹೆಣ್ಣು ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿಗಳಿರುತ್ತವೆ. ಸಾಮಾಜಿಕ ಜಲತಾಣಗಳಲ್ಲಿ ಪೋಸ್ಟ್ಗಳನ್ನು ಹಾಕುವಾಗ ಎಚ್ಚರ ವಹಿಸಬೇಕು. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್, ಸ್ತ್ರೀ ರೋಗ ತಜ್ಞೆ ಡಾ.ಶಾಲಿನಿ, ನಗರಸಭೆ ಮಾಜಿ ಅಧ್ಯಕ್ಷೆ ಶಾಂತಮ್ಮ, ವಿದುಷಿ ಶಾರದಾ ಶ್ರೀಧರ್,ಪ್ರಗತಿಪರ ರೈತ ಮಹಿಳೆ ಬಿ.ಮಂಜುಳ, ಮುಕ್ತಿಧಾಮದ ನಿರ್ವಾಹಕಿ ಲಕ್ಷ್ಮಮ್ಮ, ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಪಾಲಕರಾದ ರಾಧಾಮಣಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ರಾಮ ಆಸ್ಪತ್ರೆಯ ನಿರ್ದೇಶಕ ಡಾ.ಎಚ್.ಜಿ.ವಿಜಯ ಕುಮಾರ್, ಸುಜ್ಞಾನ ದೀಪಿಕಾ ಜಾಗೃತಿ ಸಂಚಾಲಕರಾದ ಎಂ.ಎಸ್.ಮಂಜುನಾಥ್, ಎಚ್ಇಎಚ್ಎಸ್ ಪ್ಯಾರಾಮೆಡಿಕಲ್ ಕಾಲೇಜು ಪ್ರಾಂಶುಪಾಲ ರಾಮಮೂರ್ತಿ, ಸೂರ್ಯ ಪ.ಪೂ.ಕಾಲೇಜಿನ ಪ್ರಾಂಶುಪಾಲ ಎಂ.ಸಿ.ಮಂಜುನಾಥ್ ಮೊದಲಾದವರು ಭಾಗವಹಿಸಿದ್ದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						