ದೊಡ್ಡಬಳ್ಳಾಪುರ (Doddaballapura): ಏಪ್ರಿಲ್ 11,12 ಮತ್ತು 13ರಂದು ನಗರದಲ್ಲಿ ಹಿಂದೂಪರ ಸಂಘಟನೆ ವಿಶ್ವ ಹಿಂದೂ ಪರಿಷದ್ ಬಜರಂಗದಳದ ವತಿಯಿಂದ ನಡೆಯುವ ಶ್ರೀ ರಾಮೋತ್ಸವ ಮತ್ತು ಬೃಹತ್ ಶ್ರೀರಾಮ ಶೋಭಾ ಯಾತ್ರೆಗೆ ಪೂರ್ವಭಾವಿಯಾಗಿ ಇಂದು ಸಂಜೆ ಬೈಕ್ ರ್‍ಯಾಲಿ ನಡೆಸಲಾಯಿತು.
ನಗರದ ದರ್ಗಾಜೋಗಿಹಳ್ಳಿಯ ಕೆಂಪಮ್ಮ ದೇವಾಲಯದ ಬಳಿಯಿಂದ ಬೈಕ್, ಕಾರು ಸೇರಿದಂತೆ ವಿವಿಧ ವಾಹನಗಳ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಬೈಕ್ ರ್‍ಯಾಲಿಯಲ್ಲಿ ಸುಮಾರು 400ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪಾಲ್ಗೊಂಡಿದ್ದವು.
ರ್‍ಯಾಲಿಯಲ್ಲಿ ಭಾರತ್ ಮಾತಾಕಿ ಜೈ ಹಾಗೂ ಹಿಂದೂ ಪರ ಘೋಷಣೆಗಳು ಕೇಳಿ ಬಂದವು.
ಸಂಜೆ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್‍ಯಕ್ರಮಗಳು ನಡೆಯಲಿವೆ.
ಏ.12ರಂದು ಬೆಳಿಗ್ಗೆ 7 ಗಂಟೆಯಿಂದ ಗೋ ಪೂಜೆ, ಮಹಾಗಣಪತಿ ಹೋಮ, ರಾಮ ತಾರಕ ಹೋಮ, ದುರ್ಗಾ ಹೋಮಗಳಿವೆ. ಮಧ್ಯಾಹ್ನ ಸಾವಿರಾರು ಮಹಿಳೆಯರಿಂದ ಲಲಿತ ಸಹಸ್ರನಾಮ ಮತ್ತು ಹನುಮಾನ್ ಚಾಲಿಸ್ ಸಾಮೂಹಿಕ ಪಠಣ ನಡೆಯಲಿದೆ. ಸಂಜೆ 4 ಗಂಟೆಗೆ ಶ್ರೀ ಸೀತಾರಾಮ ಕಲ್ಯಾಣೋತ್ಸವ ನಡೆಯಲಿದೆ.
ಏ.13 ರಂದು ಮಧ್ಯಾಹ್ನ 12.30ಕ್ಕೆ ಭಗತ್‌ಸಿಂಗ್ ಕ್ರೀಡಾಂಗಣದಿಂದ ಬೃಹತ್ ಶೋಭಾ ಯಾತ್ರೆ ನಡೆಯಲಿದೆ. ಮೆರವಣಿಗೆಯಲ್ಲಿ ಭಾರತ ಮಾತೆ, ಶ್ರೀರಾಮ, ಹನುಮ, ಶಿವ, ಭುವನೇಶ್ವರಿ, ಅಂಬೇಡ್ಕರ್, ಶಿವಾಜಿ ಪ್ರತಿಮೆಗಳೊಂದಿಗೆ ವಿವಿಧ ಕಲಾತಂಡಗಳು ಭಾಗವಹಿಸಲಿವೆ.
ನಂತರ ಕಾಸರಗೂಡಿನ ಕುಂಟಾರು ರವೀಶ್ ತಂತ್ರಿ ಅವರಿಂದ ದಿಕ್ಸೂಚಿ ಭಾಷಣವಿದೆ. ಸಂಜೆ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಲೇಸರ್ ಶೋ, ಬೃಹತ್ ರಾವಣ ದಹನ ಮತ್ತು ಆಕರ್ಷಕ ಸಿಡಿಮದ್ದುಗಳ ಪ್ರದರ್ಶನ ಕಾರ್‍ಯಕ್ರಮಗಳಿವೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						