ದೊಡ್ಡಬಳ್ಳಾಪುರ; ನಗರದ ಖಾಸ್‍ಬಾಗ್ ದರ್ಗಾಪುರದಲ್ಲಿನ ಶ್ರೀ ರಥಸಪ್ತಮಿ ಶನೇಶ್ವರ ಸ್ವಾಮಿ (Sri Rathasaptami Shaneshwara Swamy) ದೇವಾಲಯದಲ್ಲಿ ರಜತಮಹೋತ್ಸವ ಹಾಗೂ ಶ್ರೀ ಶನೇಶ್ವರ ಜಯಂತಿಯನ್ನು (Shaneshwara Jayanti) ಶ್ರದ್ಧಾಭಕ್ತಿ ಸಂಭ್ರಮಗಳಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಅಭಿಷೇಕ, ಬೆಳ್ಳಿ ಕವಚ ಧಾರಣೆ, ಶನೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮ ನಡೆಯಿತು.
ಮಕರ, ಕುಂಭ, ಮೀನ ರಾಶಿಯವರಿಗೆ ವಿಶೇಷವಾಗಿ ಶನೇಶ್ವರ ಶಾಂತಿ ತಿಲ ಹೋಮ ಹಮ್ಮಿಕೊಳ್ಳಲಾಗಿತ್ತು.
ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಪಸೀಹಳ್ಳಿಯ ಪುಷ್ಪಾಂಡಜ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಯಜ್ಞ ಎಂದರೆ ಜಾಗೃತಿ ಎಂದು ಅರಿಯಬೇಕಿದ್ದು, ದೇವಾಲಯಗಳಲ್ಲಿ ಬಂದು ಹೋಗುವಾಗ ನಮ್ಮ ಮನಸ್ಸುಗಳ ಪರಿವರ್ತನೆಯಾಗಿ, ಸಮಾಜ ಮುಖಿ ಚಿಂತನೆ ಮಾಡುವುದನ್ನು ರೂಢಿಸಿಕೊಳ್ಳಬೇಕು.
ಜ್ಞಾನ, ಕರ್ಮ, ಉಪಾಸನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಪ್ರಕೃತಿಯಲ್ಲಿ ಭಗವಂತನನ್ನು ನಾವು ವಿವಿಧ ರೀತಿಗಳಲ್ಲಿ ಆರಾಧಿಸುತ್ತಿದ್ದರೂ, ಬೇರೆ, ಬೇರೆ ಹೆಸರುಗಳಿದ್ದರೂ ನಮ್ಮ ಭಕ್ತಿ ಸಮರ್ಪಣೆಯಾಗುವುದು ಭಗವಂತನಿಗೆ.
ದೇವಾಲಯಗಳಿಗೆ ಬಂದು ನಮ್ಮ ಜಡತ್ವ, ನಕಾರಾತ್ಮಕ ಚಿಂತನೆಗಳನ್ನು ಬಿಟ್ಟು, ಒಳ್ಳೆಯ ಆಲೋಚನೆಗಳ ಮರು ಪೂರಣ ಮಾಡಿಕೊಳ್ಳಬೇಕು. ಸರಿ,ತಪ್ಪುಗಳ ವಿವೇಚನೆ ಇರಬೇಕು. ಮಾನವೀಯತೆಯನ್ನು ನಾವು ಮರೆಯಬಾರದು.
ಧಾರ್ಮಿಕ ಕಾರ್ಯಗಳ ಜೊತೆಗೆ ಪ್ರಕೃತಿಯನ್ನು ಉಳಿಸುವ ಕೆಲಸವಾಗಬೇಕಿದ್ದು, ಹುಟ್ಟು ಹಬ್ಬ ಮೊದಲಾದ ಸಂದರ್ಭಗಳಲ್ಲಿ ಸಸಿವ ನೆಟ್ಟು ಪರಿಸರ ಸಂರಕ್ಷಿಸುವ, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕಾರ್ಯ ಕೈಗೊಳ್ಳಬೇಕು ಎಂದರು.
ಈ ವೇಳೆ ಶ್ರೀ ರಥಸಪ್ತಮಿ ಶನೇಶ್ವರ ಸ್ವಾಮಿ ದೇವಾಲಯ ಸಮಿತಿಯ ಅಧ್ಯಕ್ಷ ಡಿ.ಎನ್.ದೊಡ್ಡನರಸಪ್ಪ, ಉಪಾಧ್ಯಕ್ಷ ಪೈಲ್ವಾನ್ ಶ್ರೀನಿವಾಸ್, ಪ್ರಧಾನ ಅರ್ಚಕ ಹಾಗೂ ಸಂಸ್ಥಾಪಕ ಎಂ.ಪುಟ್ಟಯ್ಯ, ಮುಖ್ಯ ಸಲಹೆಗಾರ ಎಂ.ಎಸ್.ಮಂಜುನಾಥ್, ವ್ಯವಸ್ಥಾಪಕ ಹಾಗೂ ಅರ್ಚಕ ಪು.ಮಹೇಶ್, ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನ ಕುಂಟೆ ಮೊದಲಾದವರು ಹಾಜರಿದ್ದರು.
ಕಾರ್ಯಕ್ರಮದ ಅಂಗವಾಗಿ ಗಂಗಾಧರಯ್ಯ ಅವರಿಂದ ಹರಿಕಥೆ, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮಗಳು ನಡೆದವು.
ಸಂಜೆ ಲಲಿತಾ ಸಹಸ್ರನಾಮ, ಪ್ರಾಕಾರೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಕನಕಾಭಿಷೇಕ ಭಜನೆ ಕಾರ್ಯಕ್ರಮಗಳು ನಡೆದವು.