ದೊಡ್ಡಬಳ್ಳಾಪುರ: 18ನೇ ಆವೃತ್ತಿಯ ಐಪಿಎಲ್ (IPL) ಪಂದ್ಯಾವಳಿಯ ಹೈವೋಲ್ವೇಜ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.
ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ವಿರಾಟ್ ಕೊಹ್ಲಿಯ ಸುಮಾರು ಎರಡು ದಶಕಗಳ ಸುದೀರ್ಘ ಕಾಯುವಿಕೆಗೆ ಮುಕ್ತಿ ಸಿಗಲಿ ಎಂಬುದು ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆ, ಕನಸು ಹಾಗೂ ಹಾರೈಕೆಯಾಗಿದೆ.
ಅಹಮದಾಬಾದ್ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಸಾವಿರಾರು ಆರ್ ಸಿಬಿ ಅಭಿಮಾನಿಗಳು ನಂ.18 ಜೆರ್ಸಿ ಧರಿಸುವುದರೊಂದಿಗೆ ಕೊಹ್ಲಿಯನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ.
ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ RCB ಜೆರ್ಸಿಗಾಗಿ ಅಭಿಮಾನಿಗಳು ಪರದಾಡಿದಾಡಿದ್ದಾರೆ. ಆರ್‌ಸಿಬಿ ಫೈನಲ್ ಹಂತಕ್ಕೆ ತಲುಪುತಿದ್ದಂತೆ ಜೆರ್ಸಿ ಬೇಡಿಕೆ ಹೆಚ್ಚಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಜೆರ್ಸಿ ಮಾರಾಟವಾಗಿದೆ.
ಇಂದು ಸಂಜೆಯ ವರೆಗೂ ಅಂಗಡಿಗಳಲ್ಲಿ ಜೆರ್ಸಿ ಬೇಕೆಂದು ಅಭಿಮಾನಿಗಳು ತೆರಳುತ್ತಿರುವುದು ನಗರದ ಪ್ರಮುಖ ಅಂಗಡಿಗಳಲ್ಲಿ ಕಂಡುಬಂತು.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಎಸ್‌ಜಿಬಿ ಪ್ಯಾಷನ್ಸ್ ಮಾಲೀಕ ನಾಗಾರ್ಜುನ್, ಪ್ರತಿ ಆವೃತ್ತಿಯಲ್ಲಿ ಆರ್‌ಸಿಬಿ ಅಭಿಮಾನಿಗಳ ಅಭಿಮಾನದ ಬಗ್ಗೆ ಎರಡು ಮಾತಿಲ್ಲ. ಆದರೆ, RCB ತಂಡ ಫೈನಲ್ ಕ್ವಾಲಿಫೈ ಆಗುತ್ತಿದ್ದಂತೆ ಏಕಾಏಕಿ ಜೆರ್ಸಿ ಬೇಡಿಕೆ ಆರಂಭವಾಯಿತು.
ಇಂದಿಗೆ ಸುಮಾರು 30 ಸಾವಿರಕ್ಕೂ ಹೆಚ್ಚು RCB ಜೆರ್ಸಿ ಮಾರಾಟವಾಗಿದೆ. ಅಂತಿಮವಾಗಿ ಯಾವ ಮಟ್ಟಕ್ಕೆ ಬೇಡಿಕೆ ಎಂದರೆ ಪೂರೈಕೆ ಮಾಡಲು ಕೂಡ ಅಂಗಡಿ ಮಾಲೀಕರು, ಗಾರ್ಮೆಂಟ್ಸ್‌ಗಳಿಗೂ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಇನ್ನೂ ಈ ಕುರಿತು ಹಿರಿಯ ಪತ್ರಕರ್ತ ಗಂಗರಾಜ್ ಶಿರವಾರ ಮಾತನಾಡಿ, RCB ಬಗ್ಗೆ ಅಭಿಮಾನಿಗಳಲ್ಲಿ ಇಷ್ಟು ಅಭಿಮಾನ ಇರುವುದು ಕಂಡು ಆಶ್ಚರ್ಯಕ್ಕೆ ಒಳಗಾಗಿದ್ದೇನೆ. ಆತ್ಮೀಯ ಗೆಳೆಯರಿಗೆ ಜೆರ್ಸಿ ಕೊಡಿಸಲು ಅಂಗಡಿಗಳಿಗೆ ತೆರಳಿದೆ. ಅಲ್ಲಿದ್ದ ನೂಕುನುಗ್ಗಲು, ಆ ಅಭಿಮಾನ, ಜೆರ್ಸಿ ಸಿಗದೆ ಇದ್ದಿದ್ದಕ್ಕೆ ಬೇಸರ ಕಂಡು ಬೆರಗಾಗಿರುವೆ ಎಂದಿದ್ದಾರೆ.