ದೊಡ್ಡಬಳ್ಳಾಪುರ: ಮಳೆ ನಿಂತರೂ ಮರದ ಹನಿ ನಿಲ್ಲದಂತೆ ಬಮೂಲ್ ನಿರ್ದೇಶಕರ (Bamul Directors) ಚುನಾವಣೆ ಮುಕ್ತಾಯವಾಗಿ ಫಲಿತಾಂಶ ಪ್ರಕಟವಾಗಿ ಎರಡು ವಾರ ಕಳೆದರೂ ಕಾಂಗ್ರೆಸ್ (Congress), ಬಿಜೆಪಿ (BJP) ಮುಖಂಡರ ಪರಸ್ಪರ ಕೆಸರೆರಚಾಟ ನಿಂತಿಲ್ಲ. ಆರೋಪ, ಪ್ರತ್ಯಾರೋಪ ಶುರುವಾಗಿದೆ.
‘ಬಮೂಲ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ನಿರ್ದೇಶಕ ಬಿ.ಸಿ.ಆನಂದಕುಮಾರ್ (BC Anand Kumar) ಉಂಡ ಮನೆಗೆ ದ್ರೋಹ ಬಗೆದು, ಈಗ ನಮ್ಮನ್ನೇ ನಿಂದಿಸುತ್ತಿದ್ದಾರೆ. ಅವರು ಹಿಂದೆ ಅನುಭವಿಸಿದ್ದ ಹುದ್ದೆಗಳು ಕಾಂಗ್ರೆಸ್ ನೀಡಿದ್ದ ಭಿಕ್ಷೆ. ಇದನ್ನು ನಾನು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿ ಹೇಳುತ್ತೇನೆ’ ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ (T.Venkataramaniah) ಸವಾಲು ಹಾಕಿದ್ದಾರೆ.
ಈ ಆರೋಪಗಳಿಗೆ ತಿರುಗೇಟು ನೀಡಲು ಬಮೂಲ್ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್ (BC Anand Kumar) ಅವರು ನಾಳೆ (ಜೂ.08) ರಂದು ಸುದ್ದಿಗೋಷ್ಠಿಗೆ ಕರೆ ನೀಡಿದ್ದಾರೆ.
ಅಲ್ಲದೆ ಈ ಮುಂಚೆ ವಿಧಾನಸಭೆ ಚುನಾವಣೆಯಲ್ಲಿ ರಚನೆಯಾಗಿದ್ದ ಸ್ವಾಭಿಮಾನಿ ಮುಖಂಡರು ಹಾಗೂ ಕಾರ್ಯಕರ್ತರ ಬಣಕ್ಕೆ ನಗರದ ಹಾಲು ಶೀತಲ ಕೇಂದ್ರದಲ್ಲಿ ಜೂ.08 ರ ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ಬಿಸಿ ಆನಂದ್ ಅವರು ಕರೆ ನೀಡಿದ್ದು, ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ನಾಳೆಯ ಸುದ್ದಿಗೋಷ್ಠಿ ಸಾಕ್ಷಿಯಾಗಲಿದೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						