ದೊಡ್ಡಬಳ್ಳಾಪುರ: ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ 132 ಮಂದಿ ಶಿಕ್ಷಕರ (Teachers) ಹುದ್ದೆ ಖಾಲಿಯಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮೇಲೆ ತೀವ್ರತರವಾದ ಆತಂಕ ಎದುರಾಗಿದೆ.
ಇದರ ಬೆನ್ನಲ್ಲೇ ನಿನ್ನೆ ದೊಡ್ಡಬೆಳವಂಗಲ ಹೋಬಳಿಯ ಐಯನಹಳ್ಳಿಯಲ್ಲಿ ಶಿಕ್ಷಕರ ಕೊರತೆ, ಸಮಯಕ್ಕೆ ಸರಿಯಾಗಿ ಶಿಕ್ಷಕರು ಬರುತ್ತಿಲ್ಲವೆಂದು ಆರೋಪಿಸಿ ಎಸ್‌ಡಿಎಂಸಿ ಆಡಳಿತ ಮಂಡಳಿ ಹಾಗೂ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.
ಈ ಕುರಿತಂತೆ ಬಿಜೆಪಿ ಕಾರ್ಯದರ್ಶಿ ಮಧು ಬೇಗಲಿ ರಾಜ್ಯ ಸರ್ಕಾರ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೇವಲ ಗ್ಯಾರಂಟಿ ಯೋಜನೆ ಮೂಲಕ ಮತವನ್ನು ಪಡೆಯಲು ಜನರನ್ನು ಮರಳು ಮಾಡುತ್ತಿದೆಯೇ ಹೊರತು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಮುಂದಾಗಿಲ್ಲ.
ಶಿಕ್ಷಕರ ಕೊರತೆ ಎಂಬುದು ಕೇವಲ ದೊಡ್ಡಬಳ್ಳಾಪುರಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜ್ಯಾದ್ಯಂತ ಸುಮಾರು 15 ಸಾವಿರಕ್ಕೂ ಹೆಚ್ಚಿನ ಶಿಕ್ಷಕರ ಕೊರತೆ ಇದ್ದು, ಈ ನಿಟ್ಟಿನಲ್ಲಿ ನೇಮಕ ಎಂಬುದಾಗಿ ಶಿಕ್ಷಣ ಸಚಿವರ ಭರವಸೆ ಮಾಧ್ಯಮಗಳ ಹೇಳಿಕೆ ಮಾತ್ರ ಸೀಮಿತವಾಗಿದೆ ಎಂದು ಆರೋಪಿಸಿದರು.
ಮುಂದುವರೆದು ದೊಡ್ಡಬಳ್ಳಾಪುರದಲ್ಲಿ ಶಿಕ್ಷಕರ ಕೊರತೆ ನೀಗಿಸಲು ಅಗತ್ಯ ಶಿಕ್ಷಕರ ನೇಮಕ ಮಾಡುವಂತೆ ಈಗಾಗಲೇ ಶಾಸಕರಾದ ಧೀರಜ್ ಮುನಿರಾಜು ಅವರು ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆದಾಗ್ಯೂ ಶಿಕ್ಷಕರ ನೇಮಕಕ್ಕೆ ಸರ್ಕಾರ ಮುಂದಾಗಿಲ್ಲ.
ಇನ್ನು ನೂತನವಾಗಿ ದೊಡ್ಡಬಳ್ಳಾಪುರ ಬಿಇಒ ಆಗಿ ಬಂದಿರುವ ಶಂಕರಯ್ಯ ಅವರ ಮೇಲೆ ಭರವಸೆ ಹೆಚ್ಚಾಗಿದ್ದು, ಶಾಸಕರು ಸರ್ಕಾರಕ್ಕೆ ಮನವಿ ಮಾಡಿರುವ ಕುರಿತಂತೆ ಇಲಾಖೆಗೆ ಹೆಚ್ಚಿನ ಒತ್ತಡ ಹೇರಿ ಅಗತ್ಯ ಶಿಕ್ಷಕರನ್ನು ನೇಮಿಸುವುದು, ಈಗಿರುವ ಶಿಕ್ಷಕರನ್ನು ಸಮರ್ಪಕವಾಗಿ ಪಾಠಪ್ರವಚನಗಳಿಗೆ ಮುಂದಾಗುವಂತೆ ಕಟ್ಟುನಿಟ್ಟಿನ ಆದೇಶ ನೀಡಬೇಕೆಂದು ಮಧು ಬೇಗಲಿ ಒತ್ತಾಯಿಸಿದ್ದಾರೆ.