ಕೊಡಗು: ನಾವು ಸಮಾಜವನ್ನು ನೋಡುವ ದೃಷ್ಟಿಯನ್ನು ಕಳೆದುಕೊಂಡರೆ ಕಣ್ಣಿರುವ ಕುರುಡರನ್ನು, ಕಿವಿ ಇರುವ ಕಿವುಡರನ್ನು ಸೃಷ್ಟಿಸುತ್ತೇವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ (K.V. Prabhakar) ಅಭಿಪ್ರಾಯ ಪಟ್ಟರು.
ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ಪತ್ರಕರ್ತರಿಗೆ ಮತ್ತು ಪತ್ರಕರ್ತರ ಕುಟುಂಬಗಳಿಗೆ ಸಮಾಜ ವಿಶೇಷ ಗೌರವ ನೀಡುತ್ತದೆ ಮತ್ತು ಸರ್ಕಾರ ವಿಶೇಷ ಸವಲತ್ತುಗಳನ್ನು ಕಲ್ಪಿಸುತ್ತದೆ. ಪತ್ರಕರ್ತರು ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆಗಳಾಗಿ ಕೆಲಸ ಮಾಡುತ್ತಾರೆ ಮತ್ತು ಸಮಾಜದ ನೋವುಗಳಿಗೆ ಕನ್ನಡಿ ಹಿಡಿಯುತ್ತಾರೆ ಎನ್ನುವ ಕಾರಣದಿಂದ ಈ ವಿಶೇಷ ಗೌರವ ಮತ್ತು ಸವಲತ್ತು ಸಿಗುತ್ತಿದೆ ಎಂದು ವಿವರಿಸಿದರು.
ಈ ಒಳ ದೃಷ್ಟಿ ಪತ್ರಕರ್ತರಿಗೆ ಇರಬೇಕು. ಈ ಸಮಾಜಮುಖಿ ದೃಷ್ಟಿಯನ್ನು ನಾವು ಕಳೆದುಕೊಂಡರೆ ನಾವು ಸಮಾಜದಲ್ಲಿ ಕಣ್ಣಿರುವ ಕುರುಡರನ್ನು, ಕಿವಿ ಇರುವ ಕಿವುಡರನ್ನು ಸೃಷ್ಟಿಸುವ ಜೊತೆಗೆ ನಾವೂ ಹಾಗೇ ಬಿಡುವ ಅಪಾಯವಿದೆ ಎಂದರು.
ಇಂದು ಪತ್ರಿಕಾ ವೃತ್ತಿಯ ಬಗ್ಗೆ ಎರಡು ರೀತಿಯ ಬೇಸರದ ಮಾತುಗಳನ್ನು ಸ್ನೇಹಿತರು ನನ್ನ ಜೊತೆ ಹಂಚಿಕೊಳ್ಳುತ್ತಾರೆ. ಒಂದು, ಈ ವೃತ್ತಿ ಬದುಕು ಸಾಕಾಗಿದೆ ಸರ್. ಬ್ರೇಕಿಂಗ್ ನ್ಯೂಸ್, ಬ್ರೇಕಿಂಗ್ ನ್ಯೂಸ್ ಅಂತ ನಮ್ಮ ಉಸಿರು ಕಟ್ಟುತಾ ಇದೆ ಎನ್ನುವ ಬೇಸರ ಒಂದು ಕಡೆಗಿದೆ. ಮತ್ತೊಂದು ಕಡೆ ಬ್ರೇಕಿಂಗ್ ನ್ಯೂಸ್ ನೆಪದಲ್ಲಿ ಬರುತ್ತಿರುವ ಅಸತ್ಯ ಮತ್ತು ಅರ್ಧ ಸತ್ಯದ ಸುದ್ದಿಗಳಿಂದ ಸಮಾಜದ ಉಸಿರು ಕಟ್ಟುತ್ತಿದೆ ಎನ್ನುವ ಬೇಸರವೂ ಮತ್ತೊಂದು ಕಡೆಗಿದೆ. ಈ ಎರಡೂ ಬೇಸರಕ್ಕೂ ಬೇರೆ ಯಾರೂ ಕಾರಣರಲ್ಲ. ಪತ್ರಿಕೋದ್ಯಮದ ತೇರನ್ನು ಎಳೆಯುತ್ತಿರುವ ನಾವೇ ಕಾರಣಕರ್ತರು ಎನ್ನುವುದನ್ನು ನಾವು ಮರೆಯಬಾರದು ಎಂದರು.
ಏಕೆಂದರೆ ಸಮಾಜದ ಕಷ್ಟಗಳಿಗೆ ಕನ್ನಡಿ ಹಿಡಿಯುತ್ತಿದ್ದ ಪತ್ರಿಕೋದ್ಯಮ, ಈಗ ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಮತ್ತು ಕಾರ್ಪೋರೇಟ್ ಉದ್ಯಮಿಗಳಿಗೆ ಪರವಾಗಿ ಕನ್ನಡಿ ಹಿಡಿಯುತ್ತಿದೆ. ಇಂದು ವ್ಯಕ್ತಿಗತ ದ್ವೇಷ ಮತ್ತು ವೈಯುಕ್ತಿಕ ಬದುಕಿನ ಖಾಸಗಿತನವನ್ನು ಕೆದಕಿ ಕೆದಕಿ ಕಸವನ್ನೇ ಬ್ರೇಕಿಂಗ್ ಸುದ್ದಿಗಳನ್ನಾಗಿಸುತ್ತಿದ್ದೇವೆ.
ನಾವು ಕಸವನ್ನು ಕೆದಕುವಾಗ ನಮಗೆ ಕಸವೇ ಸಿಗುತ್ತದೆ. ನಾವು ಏನನ್ನು ಹುಡುಕುತ್ತೀವೋ ಅದೇ ನಮಗೆ ಸಿಗುತ್ತದೆ. ಇದೇ ಕಸ ಕಣ್ಣಿಗೆ, ಕಿವಿಗೆ ಬಿದ್ದರೆ ಸಮಾಜದಲ್ಲಿ ಕಣ್ಣಿರುವ ಕುರುಡರನ್ನು, ಕಿವಿ ಇರುವ ಕಿವುಡರನ್ನು ಸೃಷ್ಟಿಸಿದಂತಾಗುವುದಿಲ್ಲವೇ ಎನ್ನುವ ಪ್ರಶ್ನೆಯನ್ನು ಪತ್ರಕರ್ತರು ಮಾತ್ರವಲ್ಲ, ಇಂದು ಪ್ರತಿಭಾ ಪುರಸ್ಕಾರ ಸ್ವೀಕರಿಸುತ್ತಿರುವ ಮಕ್ಕಳೂ ಕೇಳಿಕೊಳ್ಳಬೇಕಿದೆ ಎಂದರು.
ಪ್ರತಿಭಾ ಪುರಸ್ಕಾರ ಸ್ವೀಕರಿಸುತ್ತಿರುವ ಮಕ್ಕಳು ಒಂದು ಮಾತನ್ನು ನೆನಪಿಡಬೇಕು. ನಿಮ್ಮಷ್ಟೇ ಪ್ರತಿಭೆ ಇರುವ, ನಿಮಗಿಂತ ಪ್ರತಿಭೆ ಇರುವ ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡುವವರ ಮಕ್ಕಳು ಹೊರಗಿದ್ದಾರೆ. ಹೆಚ್ಚಿನವರಿಗೆ ಈ ಅವಕಾಶ ಮತ್ತು ಗೌರವ ಪ್ರಾಪ್ತಿ ಆಗುವುದಿಲ್ಲ. ಇಂಥಾ ಅವಕಾಶ ವಂಚಿತ ಮಕ್ಕಳ, ಅವಕಾಶ ವಂಚಿತ ಸಮಾಜದ ರಾಯಭಾರಿಗಳಾಗಿ ನೀವುಗಳು ಬೆಳೆಯಬೇಕಿದೆ ಎಂದು ಕರೆ ನೀಡಿದರು.
ಈ ರೀತಿಯ ಸಮಾಜಮುಖಿ ದೃಷ್ಟಿಕೋನವನ್ನು ನಾವು ಬೆಳೆಸಿಕೊಂಡಾಗ ನಮ್ಮ ಸಾಮಾಜಿಕ ಪ್ರಜ್ಞೆ ಬೆಳಯುತ್ತದೆ. ಈ ಪ್ರಜ್ಞೆ ಬೆಳೆದಾಗ ನೀವು ಸಮಾಜದ ಆಸ್ತಿ ಆಗುತ್ತೀರಿ. ಆಗ ಈ ಸಮಾಜದ ಋಣ ತೀರಿಸಿದಂತಾಗುತ್ತದೆ ಎಂದರು.
ಅಮ್ಮನ ಮಡಿಲು-ಮನುಷ್ಯ ಸಂಬಂಧ ಅಳಿಯಬಾರದು
ತಂತ್ರಜ್ಞಾನ ಬೆಳೆದಂತೆ, ಅವಕಾಶಗಳು ದೊರೆತಂತೆ ಮನುಷ್ಯ ಸಂಬಂಧಗಳು ದುರ್ಬಲವಾಗುತ್ತಿವೆ. ತಾಯಿಯ ಮಡಿಲು, ಅಮ್ಮನ ಕೈ ತುತ್ತು, ಹಳ್ಳಿ ಮನೆ, ಹಸು-ಕುರಿ-ಕೋಳಿ ಸಾಕಾಣೆ ಎಲ್ಲವೂ ದೂರವಾಗುತ್ತಿದೆ. ಕೊನೆಗೆ ಪೋಷಕರ ಜೊತೆಯ ಒಡನಾಟವೂ ಮೊಬೈಲ್ ಗೆ ಸೀಮಿತವಾಗಿ ಮಕ್ಕಳು ವಿದೇಶಕ್ಕೆ ಹೋಗಿ ಕುಳಿತಿರುವ ಪರಿಣಾಮ ಇಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಇವೆಲ್ಲಾ ಆರೋಗ್ಯಕರ ಸಮಾಜದ ಲಕ್ಷಣವೇ ಯೋಚಿಸಿ ಎಂದು ಕರೆ ನೀಡಿದರು.
ಪತ್ರಕರ್ತರ ವಸತಿಗೆ ಯೋಜನೆ
ಈಗಾಗಲೇ ರಾಜ್ಯದ ಪತ್ರಕರ್ತರಿಗೆ ವಸತಿ ಸವಲತ್ತು ಕಲ್ಪಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸದ್ಯದಲ್ಲೇ ಯೋಜನೆ ರೂಪಿಸುವ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ವಸತಿ ಸಚಿವರ ಮಾಧ್ಯಮ ಸಂಯೋಜಕರಾದ ಲಕ್ಷ್ಮೀನಾರಾಯಣ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಸಂಘದ ರಾಜ್ಯ ಉಪಾಧ್ಯಕ್ಷರಾದ ರಮೇಶ್ ಕುಟ್ಟಪ್ಪ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.