ದೊಡ್ಡಬಳ್ಳಾಪುರ: ತಾಲೂಕಿನ ಸಾಸಲು ಹೋಬಳಿಯ ಕೊಟ್ಟಿಗೇಮಾಚೇನಹಳ್ಳಿ ವ್ಯಾಪ್ತಿಯಲ್ಲಿ ಕರಡಿ (bear) ಆತಂಕದ ಬೆನ್ನಲ್ಲೇ ಚಿರತೆ (Leopard) ಹಾವಳಿ ರೈತರ ಆತಂಕವನ್ನು ಹೆಚ್ಚಿಸಿದೆ.
ಗುರುವಾರವಷ್ಟೇ ಕೊಟ್ಟಿಗೇಮಾಚೇನಹಳ್ಳಿ ಗ್ರಾಮದ ಮಲ್ಲಿಕಾರ್ಜುನ ಗೌಡ ಅವರ ಮನೆ ಬಳಿ ಕಟ್ಟಲಾಗಿದ್ದ ಸಾಕು ನಾಯಿಯನ್ನು ಹೊತ್ತುಕೊಂಡು ಹೋದ ಬೆನ್ನಲ್ಲೇ, ಅದೇ ಸಮಯದಲ್ಲಿ ಶುಕ್ರವಾರ ರಾತ್ರಿ ಕೂಡ ಮನೆಯ ಬಳಿ ಕಟ್ಟಲಾಗಿದ್ದ ಹಸುವಿನ ಮೇಲೆ ದಾಳಿ ನಡೆಸಲು ಚಿರತೆ ಮುಂದಾಗಿದೆ.
ಇದನ್ನು ಗಮನಿಸಿದ ಮಲ್ಲಿಕಾರ್ಜುನ ಗೌಡ ಅವರ ಸಹೋದರ ಸಿದ್ದಲಿಂಗೇಗೌಡ, ಅಕ್ಕಪಕ್ಕದ ರೈತರೊಂದಿಗೆ ಶಬ್ದ ಮಾಡಿದ ಕಾರಣ ಚಿರತೆ ಸ್ಥಳದಿಂದ ಪರಾರಿಯಾಗಿದೆ.
ಈ ವ್ಯಾಪ್ತಿಯಲ್ಲಿ ವನ್ಯ ಜೀವಿಗಳಾದ ಕರಡಿ, ಚಿರತೆ, ನವಿಲುಗಳ ಹಾವಳಿ ಹೆಚ್ಚಾಗಿದ್ದು, ಜಮೀನುಗಳಲ್ಲಿ ಬಿತ್ತನೆ ಮಾಡಲಾಗಿರುವ ಕಡಲೆ, ಜೋಳ, ರಾಗಿ ಮುಂತಾದ ಬೆಳೆಗಳನ್ನು ರಕ್ಷಿಸಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ.
ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗಳು ರೈತರ ಆತಂಕಕ್ಕೆ ಕಾರಣವಾಗಿರುವ, ಚಿರತೆ ಹಾಗೂ ಕರಡಿಗಳನ್ನು ಸೆರೆ ಹಿಡಿದು ಅರಣ್ಯಪ್ರದೇಶಕ್ಕೆ ಬಿಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)