ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಬರೀ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಹೊರಟಿರುವ ಕ್ರಮ ಸರಿಯಲ್ಲ. ಇದೊಂದು ಸಂವಿಧಾನ ವಿರೋಧಿ ನಡೆ ಎಂದು ಸಂತ ಪೇತ್ರರ ಚರ್ಚ್ನ ಫಾದರ್ ಆಂಟೋನಿ ಡಿಸೋಜಾ ತಿಳಿಸಿದರು.
ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಆದೇಶಿಸಿರುವ ಕ್ರೈಸ್ತ ಸಮುದಾಯದ ಚರ್ಚುಗಳು ಮತ್ತು ಸಂಘ ಸಂಸ್ಥೆಗಳ ಗಣತಿಯ ಔಚಿತ್ಯವನ್ನು ಪ್ರಶ್ನಿಸಿ, ಕ್ರೈಸ್ತರ ಒಕ್ಕೂಟದ ನೇತೃತ್ವದಲ್ಲಿ ನಗರದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಟಿ.ಎಸ್.ಶಿವರಾಜ್ ಮನವಿ ಪತ್ರ ಅವರಿಗೆ ನೀಡಲಾಯಿತು.
ಧರ್ಮದ ವಿಚಾರದಲ್ಲಿ ಭಾರತೀಯ ಪ್ರಜೆಗಳಿಗೆ ಸಂವಿಧಾನವು ಮುಕ್ತ ಸ್ವಾತಂತ್ರ್ಯ ನೀಡಿದ್ದು, ಯಾರು ಯಾವುದೇ ಧರ್ಮವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹೀಗಿರುವಾಗ, ಮತಾಂತರ ನಿಷೇಧ ಕಾಯ್ದೆ ಜಾರಿ ಸರಿಯಲ್ಲ ಎಂದರು.
ಕ್ರೈಸ್ತರ ಮೇಲೆ ಆಧಾರರಹಿತ ಆರೋಪ ಮಾಡಲಾಗುತ್ತಿದೆ. ಬಲವಂತದ ಮತಾಂತರ ಮಾಡುವುದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಇಲ್ಲ. ಸ್ವ ಇಚ್ಛೆಯಿಂದ ಧರ್ಮ ಪಾಲನೆ ಮಾಡುವ ಸಂವಿಧಾನಬದ್ಧವಾದ ಹಕ್ಕು ಪ್ರತಿಯೊಬ್ಬರಿಗೂ ಇದೆ. ಯಾವುದೋ ಒಂದೆರಡು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಇಡೀ ಕ್ರೈಸ್ತ ಸಮುದಾಯವನ್ನು ದೂರುವುದು ಸರಿಯಲ್ಲ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ತನ್ನ ಸಭೆಯೊಂದರಲ್ಲಿ ರಾಜ್ಯದಲ್ಲಿನ ಕ್ರೈಸ್ತ ಸಮುದಾಯದ ಚರ್ಚುಗಳ ಮತ್ತು ಧಾರ್ಮಿಕ ಸಂಘ – ಸಂಸ್ಥೆಗಳ ಗಣತಿಯನ್ನು ನಡೆಸಬೇಕೆಂದು ಆದೇಶಿಸಿದೆ. ಈ ಗಣತಿಯ ಉದ್ದೇಶವಾದರೂ ಏನು..? ಸರ್ಕಾರವು ಗಣತಿ ಮಾಡಬೇಕೆಂದರೆ ಮಾಡಲಿ. ಆದರೆ ನಮ್ಮ ಸಮುದಾಯವನ್ನು ಮಾತ್ರ ಗುರಿಯಾಗಿಸಿ ಗಣತಿ ಮಾಡಲು ಆದೇಶ ನೀಡಿರುವುದು ಏಕೆ..? ಅಲ್ಲದೆ ನಮ್ಮ ಚರ್ಚುಗಳ ವಿವರಗಳು ಈಗಾಗಲೇ ಸರ್ಕಾರದ ಬಳಿ ಇರುವಾಗ ಮತ್ತೊಮ್ಮೆ ಗಣತಿ ನಡೆಸುವ ಅಗತ್ಯವಾದರು ಏನು ಎಂದು ಪ್ರಶ್ನಿಸಿದರು.
ಮತಾಂತರ ನಿಜವೇ ಆಗಿದ್ದರೆ, ನಮ್ಮ ಸಮುದಾಯ ಈ ವೇಳೆಗೆ ಅಧಿಕವಾಗಬೇಕಿತ್ತು. ಆದರೆ, ದೇಶದ ಸ್ವಾತಂತ್ರ್ಯ ನಂತರವು ನಮ್ಮ ಸಮುದಾಯದ ಸಂಖ್ಯೆ ಶೇ.1.8 ರಷ್ಟು ಮಾತ್ರವಿದೆ.
ರಾಜ್ಯ ಮತ್ತು ರಾಷ್ಟ್ರದಲ್ಲಿ ಕ್ರೈಸ್ತ ಸಮುದಾಯವು ಸಾವಿರಾರು ಶಾಲೆ, ಕಾಲೇಜುಗಳ ಮತ್ತು ಆಸ್ಪತ್ರೆಗಳ ಮೂಲ ಸೇವೆ ಮಾಡುತ್ತಿದೆ. ಈ ಶಾಲೆಗಳಲ್ಲಿ ಓದಿದವರು, ಚಿಕಿತ್ಸೆ ಪಡೆದವರು ಮತಾಂತರವಾಗಿರುವುದನ್ನು ಸಾಭೀತು ಪಡಿಸಲಿ. ಮತಾಂತರ ನಿಷೇಧ ಕಾಯ್ದೆ ಕೋಮುವಾದಿಗಳ ಕೈಗೆ ಸಿಕ್ಕಿ, ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯವೆಸಗಲು ಸಾಧ್ಯವಾಗುವುದು ಮತ್ತು ಸಮಾಜದಲ್ಲಿ ಶಾಂತಿಯನ್ನು ಕದಡಲು ಪ್ರಯತ್ನಿಸಬಹುದು. ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿ ಚಿಂತನೆ ಕೈ ಬಿಡಬೇಕು ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಆದೇಶವನ್ನು ಹಿಂಪಡೆಯಬೇಕೆಂದರು.
ಈ ವೇಳೆ ಸೂಸೈಪಾಳ್ಯದ ಸೇಂಟ್ ಜೋಸೆಫ್ ಚರ್ಚ್ನ ಫಾ.ಆಂಥೋನಿ ಡೇನಿಯಲ್, ಕಾರೇಹಳ್ಳಿ ಸೇಂಟ್ ಜೂಡ್ಸೆ ಚರ್ಚ್ನ ಫಾ.ಮ್ಯಾಥ್ಯೂ ಕೊಟ್ಟಾಯಿಲ್, ಯಲಹಂಕದ ವೆಲಾಂಗಣಿ ಚರ್ಚ್ನ ಫಾ.ಅಮಲ, ಪಾದ್ರಿಗಳಾದ ಡೇವಿಡ್, ಲ್ಯೂಕ್, ಆಂಜಿನಪ್ಪ ಮತ್ತಿತರರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….