
ದೊಡ್ಡಬಳ್ಳಾಪುರ: ನಗರದ ತೇರಿನ ಬೀದಿಯಲ್ಲಿ ಶ್ರೀ ಪ್ರಸನ್ನ ಚಂದ್ರಮೌಳೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು.
ಮುಜರಾಯಿ ಇಲಾಖೆ ಹಾಗೂ ದೇವಾಲಯದ ಭಕ್ತ ಮಂಡಲಿ ವತಿಯಿಂದ ತಾಲೂಕು ತಹಸೀಲ್ದಾರರ ಉಸ್ತುವಾರಿಯಲ್ಲಿ ನಡೆದ ಬ್ರಹ್ಮ ರಥೋತ್ಸವದಲ್ಲಿ ವಿವಿದಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ರಥಕ್ಕೆ ಬಾಳೆಹಣ್ಣು, ದವನ ಅರ್ಪಿಸಿ ಧನ್ಯತಾ ಭಾವ ಮೆರೆದರು.
ಕಳೆದ ಬಾರಿ ಕೋವಿಡ್ ಹಿನ್ನಲೆಯಲ್ಲಿ ಸಣ್ಣ ರಥದಲ್ಲಿ ಸಾಂಕೇತಿಕವಾಗಿ ರಥೋತ್ಸವ ಆಚರಿಸಲಾಗಿತ್ತು.
ಬ್ರಹ್ಮ ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಗಿರಿಜಾ ಕಲ್ಯಾಣೋತ್ಸವ ನಡೆಯಿತು. 5 ಅಡಿಯ ಕಲ್ಲಿನ ಚಕ್ರಗಳ ಮೇಲೆ,ಐದು ಅಂತಸ್ತುಗಳ ಶಿವನ ವಿವಿಧ ರೂಪ, ಅವತಾರಗಳನ್ನು ಹೊಂದಿರುವ ಚಿತ್ರಪಟಗಳು ಹಾಗೂ ತಳಿರು ತೋರಣಗಳಿಂದ ಭವ್ಯ ರಥವು ಸಿಂಗಾರಗೊಂಡಿತ್ತು.
ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಯಾಗ, ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಶ್ರೀಕಂಠೇಶ್ವರ ಭಕ್ತ ಮಂಡಲಿ, ನಂಜುಂಡೇಶ್ವರ ಸೇವಾ ಸಮಿತಿ, ಸೇರಿದಂತೆ ವಿವಿಧ ಅರವಂಟಿಗೆ ಸಮಿತಿಗಳಿಂದ ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗೆ ಅರವಂಟಿಗೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು.
ರಥೋತ್ಸವದಲ್ಲಿ ತಹಸೀಲ್ದಾರ್ ಟಿ.ಎಸ್.ಶಿವರಾಜ್ ಮೊದಲಾದ ಗಣ್ಯರು ಭಾಗವಹಿಸಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….
 
				 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						