ಬೆಂಗಳೂರು, (ಸೆಪ್ಟೆಂಬರ್.16); ಒಕ್ಕಲಿಗ ಹಾಗೂ ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರು ಕೂಡಲೇ ತಮ್ಮ ಹೇಳಿಕೆ ಕುರಿತು ಕ್ಷಮೆ ಯಾಚಿಸಬೇಕೆಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ಮಾಡಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿದ್ದು ಓರ್ವ ಜನಪ್ರತಿನಿಧಿಯಾಗಿರುವ ಮುನಿರತ್ನ ಅವರ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಸಮಾಜದಲ್ಲಿ ಪ್ರತಿಯೊಂದು ಸಮುದಾಯಗಳಿಗೂ ತಮ್ಮದೇ ಆದ ಆತ್ಮಾಭಿಮಾನಿ ಮತ್ತು ಸ್ವಾಭಿಮಾನ ಇರುತ್ತದೆ. ಯಾರೊಬ್ಬರ ಮನಸ್ಸನ್ನು ನೋಯಿಸುವ ಕೆಲಸ ಮಾಡಬಾರದೆಂದು ಕಿವಿಮಾತು ಹೇಳಿದ್ದಾರೆ.
ಮುನಿರತ್ನ ಅವರು ಕಳೆದ ಹಲವಾರು ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿದ್ದವರು. ಅಂಥವರಿಂದ ಇಂತಹ ಆಶ್ಲೀಲಪದಗಳನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಇಂತಹ ಅವಹೇಳನಕಾರಿ ಮಾತುಗಳನ್ನು ನಾವು ಖಂಡಿಸುತ್ತೇವೆ. ಕೂಡಲೇ ತಮ್ಮ ಹೇಳಿಕೆಗೆ ಪ್ರಾಯಶ್ಚಿತ ರೂಪದಲ್ಲಿ ಕ್ಷಮೆ ಕೇಳಬೇಕೆಂದು ಸೂಚಿಸಿದ್ದಾರೆ.
‘ಇಂದು ಸಮಾಜದಲ್ಲಿ ಮಹಿಳೆಯರು ಪುರುಷರಿಗೆ ಸಮನಾಗಿ ಎಲ್ಲಾ ಕ್ಷೇತ್ರಗಳಲ್ಲೂ ಅದ್ವೀತಿಯ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರ ಸಬಲೀಕರಣವಾಗಬೇಕೆಂಬ ಎಲ್ಲರೂ ಅಪೇಕ್ಷೆ ಪಡುತ್ತಿರುವಾಗ ಶಾಸಕರಾಗಿ ಮುನಿರತ್ನ ಅವರು ಮಹಿಳೆಯ ಬಗ್ಗೆ ಇಷ್ಟು ಕ್ಷುಲ್ಲಕವಾಗಿ ಮಾತನಾಡಿದ್ದನ್ನು ನಾಗರಿಕ ಸಮಾಜ ಒಪ್ಪಲು ಸಾಧ್ಯವೇ ಇಲ್ಲ ಎಂದು ಶ್ರೀಗಳು ಆಕ್ಷೇಪಿಸಿದ್ದಾರೆ.
ಸಮಾಜದಲ್ಲಿ ಮೇಲುಕೀಳು, ಬಡವಬಲಿದ ಎನ್ನದೆ ನಾವೆಲ್ಲರೂ ಒಂದೇ ಎಂಬುದು ಸಂವಿಧಾನದ ಆಶಯ. ಅದಕ್ಕೆ ತಕ್ಕಂತೆ ಜನಪ್ರತಿನಿಧಿಗಳು ನಡೆದುಕೊಳ್ಳಬೇಕು. ಮುನಿರತ್ನ ಅವರ ಮಾತನ್ನು ಕೇಳಿ ಒಂದು ಕ್ಷಣ ದಿಗ್ಧಾಂತನಾಗಿದ್ದೇನೆ ಎಂದು ಹೇಳಿದ್ದಾರೆ.
ಒಕ್ಕಲಿಗ ಸಮುದಾಯದ ಬಗ್ಗೆಯೂ ಅವರು ಆಡಿರುವ ಮಾತುಗಳು ಯಾರಿಗೂ ಶೋಭೆ ತರುವುದಿಲ್ಲ. ಸ್ವಾಭಿಮಾನದ ಸಂಕೇತದಂತಿರುವ ಒಕ್ಕಲಿಗರು ಇನ್ನೊಬ್ಬರಿಗೆ ಕೈ ಎತ್ತಿ ದಾನ ಮಾಡುವರೇ ಹೊರತು ಬೇರೆಯವರ ಬಳಿ ಎಂದೂ ಕೈಚಾಚುವವರಲ್ಲ. ಅಂತಹ ಸಮಾಜದ ಬಗ್ಗೆ ಕ್ಷುಲಕವಾಗಿ ಮಾತನಾಡಿರುವ ಮುನಿರತ್ನ ಅವರು ಕೂಡಲೇ ಕ್ಷಮಾಪಣೆ ಕೇಳುವಂತೆ ಬುದ್ದಿಮಾತು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮುನಿರತ್ನ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇದರ ಸತ್ಯಸತ್ಯತೆಯನ್ನು ಸರ್ಕಾರ ಪರಿಶೀಲಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಡಬೇಕು. ಒಂದು ವೇಳೆ ಇದರಲ್ಲಿರುವ ಧ್ವನಿ ಮುನಿರತ್ನ ಅವರದ್ದೇ ಎಂದು ದೃಢವಾದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕು ಎಂದು ಶ್ರೀಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….