ದೊಡ್ಡಬಳ್ಳಾಪುರ: ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಮತ್ತು WWF ಸಂಸ್ಥೆಯ ಸಹಭಾಗಿತ್ವದಲ್ಲಿ ನಗರದ ಪಾಲನಜೋಗಿಹಳ್ಳಿ ಕೆರೆಯ ಭಾಗದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಗ್ರಾಪಂ ಅಧ್ಯಕ್ಷೆ ಆಶಾರಾಣಿ ನಾಗರಾಜ್ ಮಾತನಾಡಿ, ಹೆದ್ದಾರಿಯ ಪಕ್ಕದಲ್ಲೇ ಕೆರೆಕಟ್ಟೆ ಇರುವುದರಿಂದ ತ್ಯಾಜ್ಯ ವಸ್ತುಗಳನ್ನು ಹಾಕುವುದು ಹೆಚ್ಚಾಗಿದೆ. ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ ದಂಡ ವಿಧಿಸುವುದಾಗಿ ಎಚ್ಚರಿಕೆ ಮತ್ತು ಸೂಚನೆ ಫಲಕ ಅಳವಡಿಸಲಾಗುವುದು ಎಂದು ತಿಳಿಸಿದರು.
ಅರ್ಕಾವತಿ ನದಿ ಜಲಾನಯನ ಪ್ರದೇಶದಲ್ಲಿ ಈ ಕೆರೆ ಒಳಪಡುವುದರಿಂದ ಸ್ಥಳೀಯ ಸಾರ್ವಜನಿಕರು ಕೆರೆಯ ಸುತ್ತಮುತ್ತ ಕಲುಷಿತ ಮತ್ತು ತ್ಯಾಜ್ಯವಸ್ತುಗಳನ್ನು ಹಾಕುವುದು ತಪ್ಪಿಸಿದರೆ ಕೆರೆಯಲ್ಲಿನ ಜಲಚರಗಳು ಮತ್ತು ಪಕ್ಷಿಗಳು ಜೀವಿಸಲು ಅನುಕೂಲ ಮಾಡಿದಂತಾಗುತ್ತದೆ ಎಂದು ಕೆರೆಮಿತ್ರ ಜನಾರ್ದನ್ ತಿಳಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ಪಂಚಾಯಿತಿ ಅಧಿಕಾರಿಗಳು, ಅಧ್ಯಕ್ಷರು, ಗ್ರಾಪಂ ಸದಸ್ಯರು, WWF ಸಂಸ್ಥೆಯ ಶಶಿಕಲಾ ಐಯ್ಯರ್, ಡಾ. ಶಾಂತಾನು ಗುಪ್ತ, ಕಾರ್ತಿಕ್ ಗೌಡ ಮತ್ತು HSBC ಸಂಸ್ಥೆಯ ಸ್ವಯಂ ಸೇವಕರು ಭಾಗವಹಿಸಿದ್ದರು.
 
				 
															 
						 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						