ಮೈಸೂರು: ನಾಡಹಬ್ಬ ಮೈಸೂರು ದಸರಾ (Dasara) ಮಹೋತ್ಸವದ ಅಂಗವಾಗಿ ನಡೆದ ಡ್ರೋನ್ ಪ್ರದರ್ಶನ ಸಾಂಸ್ಕೃತಿಕ ನಗರಿ ಮೈಸೂರಿನ ಬಾನಂಗಳದಲ್ಲಿ ಚಿತ್ತಾರ ಬಿಡಿಸುವ ಮೂಲಕ ಕಣ್ಮನ ಸೆಳೆಯಿತು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ದ ವತಿಯಿಂದ ದಸರಾ (Dasara) ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಡ್ರೋನ್ ಪ್ರದರ್ಶನ ಆಯೋಜಿಸಲಾಗಿತ್ತು. ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.

ಬಳಿಕ ನಡೆದ ಡ್ರೋನ್ ಪ್ರದರ್ಶನದಲ್ಲಿ 1500 ಡ್ರೋನ್ ಗಳು ಏಕಕಾಲದಲ್ಲಿ ಆಗಸದ ಎತ್ತರಕ್ಕೆ ಹಾರಿ ಹಲವು ಬಗೆಯ ಕಲಾಕೃತಿಗಳನ್ನು ರಚಿಸಿದವು. ಬಾಟ್ ಲ್ಯಾಬ್ ಡೈನಮಿಕ್ಸ್ ಸಂಸ್ಥೆ ಸಹಯೋಗದೊಂದಿಗೆ ಈ ಡ್ರೋನ್ ಪ್ರದರ್ಶನ ನಡೆಯಿತು.

ರಾತ್ರಿ 8:45ರ ಸುಮಾರಿಗೆ ಆರಂಭವಾದ ಡ್ರೋನ್ ಪ್ರದರ್ಶನದಲ್ಲಿ ರಾಷ್ಟ್ರಧ್ವಜ, ಚಂದ್ರಯಾನ, ವಿಶ್ವಭೂಪಟ, ಸೈನಿಕ, ಕರ್ನಾಟಕ ಭೂಪಟ, ಅಂಬಾರಿ, ಸುವರ್ಣ ಕರ್ನಾಟಕ ಸಂಭ್ರಮ, ಅರಳಿಮರ, ತಿಮಿಂಗಿಲ, ಚಾಮುಂಡೇಶ್ವರಿ ಸೇರಿದಂತೆ 15ಕ್ಕೂ ಹೆಚ್ಚು ವಿನ್ಯಾಸಗಳನ್ನು ರಚಿಸುವ ಮೂಲಕ ನೆರೆದಿದ್ದ ಜನರಿಗೆ ನಿರೀಕ್ಷೆಗೂ ಮೀರಿದ ಅನುಭವ ನೀಡಿತು.

ಡ್ರೋನ್ ಪ್ರದರ್ಶನದ ಆಕರ್ಷಣೆ ಕಣ್ತುಂಬಿಕೊಳ್ಳುವ ಸಲುವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಕಿಕ್ಕಿರಿದು ತುಂಬಿದ್ದರು.

ರಾಜೇಶ್ ಕೃಷ್ಣನ್ ಹಾಡಿನ ಮೋಡಿ:
ಡ್ರೋನ್ ಪ್ರದರ್ಶನ ಆರಂಭಕ್ಕೂ ಮುನ್ನ ಖ್ಯಾತ ಹಿನ್ನಲೆ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ತಮ್ಮ ಸುಮಧುರ ಕಂಠದಿಂದಲೇ ಕನ್ನಡಿಗರ ಮನಗೆದ್ದಿರುವ ರಾಜೇಶ್ ಕೃಷ್ಣನ್, “ಉಸಿರೇ ಉಸಿರೇ, ಜೊತೆಯಲಿ ಜೊತೆ ಜೊತೆಯಲಿ, ಯಾರೋ ಕಣ್ಣಲ್ಲಿ ಕಣ್ಣನಿಟ್ಟು, ಕುಚಿಕ್ಕು ಕುಚ್ಚಿಕು, ಕೂರಕ್ ಕುಕ್ಕರಹಳ್ಳಿಕೆರೆ ಸೇರಿದಂತೆ ಹಲವು ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ತನ್ವೀರ್ ಸೇಠ್, ನರೇಂದ್ರ ಸ್ವಾಮಿ, ಶಾಸಕರು ಹಾಗೂ ಸೆಸ್ಕ್ ನಿಗಮದ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ, ತಾಂತ್ರಿಕ ವಿಭಾಗದ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು, ದಸರಾ ದೀಪಾಲಂಕಾರ ಉಪ ಸಮಿತಿ(ಅಧಿಕಾರೇತರ) ಅಧ್ಯಕ್ಷ ಸೈಯದ್ ಇಕ್ಬಾಲ್, ಉಪಾಧ್ಯಕ್ಷರಾದ ಸುಹೇಲ್ ಬೇಗ್, ಕಾಂತರಾಜ್ ಸೇರಿದಂತೆ ಇನ್ನಿತರರು ಹಾಜರಿದ್ದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						