ಮೈಸೂರು: ಮೈಸೂರಿನ ಸುತ್ತಲ ರಸ್ತೆಗಳೆಲ್ಲಾ ಉತ್ತನಹಳ್ಳಿ ಕಡೆ ಮುಖ ಮಾಡಿದ್ದವು. ನಿನ್ನೆ ಸುರಿದ ಹದ ಮಳೆಗೆ ರಸ್ತೆಗಳೆಲ್ಲಾ ವಾಹನಗಳಿಗೆ ಕುಷನ್ ನಂತೆ ಸಹಕರಿಸುತಿದ್ದವು. ರಸ್ತೆಗಳ ತುಂಬೆಲ್ಲಾ ಜನ, ಜನ, ಜನಸಾಗರ. ಮುಂಭಾಗದ ಸೀಟುಗಳನ್ನು ಹಿಡಿಯಲು ಧಾವಂತದಿಂದ ಹೆಜ್ಜೆ ಹಾಕುತ್ತಿರುವ ಜನ, ಮಹಿಳೆ ಮಕ್ಕಳೆನ್ನದೆ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳುವ ಧಾವಂತ. ಅಪಾರ ಜನದಟ್ಟಣೆಯನ್ನ ನಿಯಂತ್ರಿಸಲು ಪೊಲೀಸರು ಮಾಡಿದ ಹರಸಾಹಸ ಅಷ್ಟಿಷ್ಟಲ್ಲ.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ತಾಯಿ ಚಾಮುಂಡೇಶ್ವರಿಯ ಸಹೋದರಿ ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನದಲ್ಲಿ ನೆಲೆಗೊಂಡಿರುವ ತ್ರಿಪುರ ಸುಂದರಿ ದೇವಿಯೂ ಅನಿರೀಕ್ಷಿತ ಜನಜಂಗುಳಿ ಕಂಡು ಅರೆಕ್ಷಣ ಗೊಂದಲಕ್ಕೀಡಾಗಿರಲು ಸಾಕು.
ಅತ್ಯಂತ ವೈಭವದಿಂದ ಸಿಂಗರಿಸಿಕೊಂಡಿದ್ದ ಬೃಹತ್ ವೇದಿಕೆ ದಾಖಲೆಯೊಂದನ್ನು ಬರೆಯಲು ತವಕಿಸುತಿತ್ತು. ಬೃಹತ್ ಗಾತ್ರದ ಎಲ್ ಇ ಡಿ ಪರದೆಗಳು ಇಂದ್ರ ಲೋಕವನ್ನೇ ಬಾಡಿಗೆಗೆ ಪಡೆದುಕೊಂಡಂತೆ ಅನಿಸುತಿತ್ತು.
ಕಿವಿಯ ತಮಟೆಗೆ ಕಚಗುಳಿಯಿಟ್ಟಂತೆ ಅನುರಣಿಸುವ ಸಂಗೀತ ಸುಧೆ ಜುಳು ಜುಳು ನೀರಿನಂತೆ ಹರಿದಿತ್ತು.
ಸಂಗೀತ ಮಾಂತ್ರಿಕರಾದ ಶ್ರೇಯಾ ಘೋಷಾಲರ ಸ್ವರ ಮಾಧುರ್ಯದಿಂದ ಹೊರಡುವ ನಿನಾದದ ಸಂಗೀತ ರಸ ಗಂಗೆಯ ಗಾನ ಸುಧೆ ಇಡೀ ಪ್ರದೇಶವನ್ನ ಆವರಿಸಿದಂತೆ ಸಂಗೀತಾಸಕ್ತರ ಸಂಗೀತ ಪ್ರಿಯರ ಸಂಗೀತ ಪ್ರೇಮಿಗಳ ಮನ ತುಂಬುವುದರೊಂದಿಗೆ ಇಡೀ ಯುವ ಸಮೂಹ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದು ಕಾರ್ಯಕ್ರಮದ ತೀವ್ರತೆಗೆ ಸಾಕ್ಷಿಯಾಗಿತ್ತು.
ಸುಂದರ ತರುಣ ತರುಣಿಯರ ಮಿಂಚಿನ ದಿರಿಸುಗಳು ನೃತ್ಯ ಮಿಶ್ರಿತ ಸಂಗೀತ ಹಾವ ಭಾವಗಳು ಎದೆಗೆ ಕಚಗುಳಿ ಇಟ್ಟಂತಿತ್ತು.
ವಾಸುಕಿ ವೈಭವ್ ಅವರ ತಂಡದ ಮನಸಿಂದ ಯಾರೂನು ಕೆಟ್ಟೋವ್ರಲ್ಲ ಹಾಡು, ಮಾನ್ವಿತಾ ಹರೀಶ್ ತಂಡದ ಹಿತಲಕ ಕರೀಬ್ಯಾಡ ಮಾವ ನೃತ್ಯ ಸೊಗಸಾಗಿತ್ತು.
ಶಿಳ್ಳೆ, ಕೇಕೆ,ಕರತಾಡನ ಕೇಳಿಸಿಕೊಂಡ ನೂರು ಎಕರೆಯ ವಿಶಾಲ ಪ್ರದೇಶ ಒಂದು ಮಗ್ಗುಲನ್ನು ಬದಲಾಯಿಸಿಕೊಂಡದ್ದಂತೂ ಸುಳ್ಳಲ್ಲ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						