ದೊಡ್ಡಬಳ್ಳಾಪುರ: ನಿನ್ನೆ ನಡೆದ ವಿಶ್ವವಿಖ್ಯಾತ ಮೈಸೂರಿನ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ತಬ್ದ ಚಿತ್ರದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕನ್ನು ಕಡೆಗಣಿಸಲಾಗಿದೆ ಎಂಬ ಆಕ್ರೋಶ ತಾಲೂಕಿನಾಧ್ಯಂತ ಬುಗಿಲೆದ್ದು, ಕನ್ನಡಪರ ಸಂಘಟನೆಗಳ ಖಂಡನೆ ವ್ಯಕ್ತಪಡಿಸಿವೆ.
ಮೈಸೂರು ದಸರಾ ಸ್ತಬ್ದಚಿತ್ರದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕಡೆಗಣಿಸಿರುವ ಬಗ್ಗೆ ವಿವಿಧ ಸಂಘಟನೆಯ ಮುಖಂಡರು ತೀವ್ರ ಬೇಸರ ವ್ಯಕ್ತಪಡಿಸಿದ್ದು, ದೊಡ್ಡಬಳ್ಳಾಪುರ ತಾಲ್ಲೂಕು ಕಡೆಗಣಿಸಿರುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮಲತಾಯಿ ಧೋರಣೆಯನ್ನು ಎದ್ದು ಕಾಣಿಸುತ್ತಿದೆ ಎಂದು ಅನೇಕ ಮುಖಂಡರು ಅಸಮಾಧಾನ ತೋರ್ಪಡಿಸಿದ್ದಾರೆ.
ದಸರಾ ಸ್ತಬ್ದ ಚಿತ್ರಕ್ಕೆ ಬಳಸಿಕೊಳ್ಳಲು ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧವಾದ ಧಾರ್ಮಿಕ ಕ್ಷೇತ್ರಗಳಾದ ಘಾಟಿ ಸುಬ್ರಮಣ್ಯ, ಮಧುರೆ ಶನಿಮಹಾತ್ಮ ದೇವಸ್ಥಾನ, ಪ್ರಕೃತಿ ತಾಣಗಳಾದ ಮಾಕಳಿ ದುರ್ಗ, ಹುಲುಕುಡಿ ಬೆಟ್ಟ, ದೊಡ್ಡಬಳ್ಳಾಪುರ ನಗರದ ನೇಕಾರಿಕೆ ಮತಾದ ಹಲವು ವಿಶೇಷಗಳಿದ್ದರೂ ಯಾವುದನ್ನು ಬಳಸಿಕೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಎಸ್.ಚಂದ್ರಶೇಖರ್, ಮೈಸೂರಿನ ದಸರಾದಲ್ಲಿ ದೊಡ್ಡಬಳ್ಳಾಪುರ ತಾಲೂಕನ್ನು ಕಡೆಗಣಿಸಿರುವುದು ಇದು ಪೂರ್ವ ನಿಯೋಜಿತ ಇದರಲ್ಲಿ ಅಧಿಕಾರಿಗಳ ಪಾತ್ರ ಇದೆಯೋ ಅಥವಾ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪಾತ್ರವಿದೆಯೋ ದೊಡ್ಡಬಳ್ಳಾಪುರ ಜನತೆಗೆ ತಿಳಿಯಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಜನಪ್ರತಿನಿದಿಗಳು ಉತ್ತರ ನೀಡದೇ ಇದ್ದರೆ ಕಪ್ಪು ಪಟ್ಟಿ ಚಳವಳಿ ಆಯೋಜಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.