ದೊಡ್ಡಬಳ್ಳಾಪುರ; ತಾಲೂಕಿನ ಸುತ್ತಮುತ್ತ ಕಳೆದ ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನಗರಕ್ಕೆ ನೀರುಣಿಸುವ ಜಕ್ಕಲಮೊಡಗು ಜಲಾಶಯ ಸೋಮವಾರ ರಾತ್ರಿ ಭರ್ತಿಯಾಗಿದ್ದು, ತುಂಬಿ ಕೋಡಿ ಹರಿದಿದೆ.

ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ನೀರು ಪೂರೈಸುವ ಜಕ್ಕಲಮೊಡಗು ಜಲಾಶಯದಲ್ಲಿ ಕಳೆದ ಬಾರಿ ಮಳೆಗಾಲದಲ್ಲಿ ಉತ್ತಮ ಮಳೆಯಾಗದೆ ಜಲಾಶಯದ ನೀರಿನ ಮಟ್ಟ ಕುಸಿತ ಕಂಡಿತ್ತು. ಇದರಿಂದಾಗಿ ಜಲಾಶಯದ ನೀರನ್ನ ಅವಲಂಬಿತ ಎರಡು ನಗರಗಳ ಜನರು ಆತಂಕಕ್ಕೆ ಒಳಗಾಗಿದ್ದರು. ಆದರೆ ಹಿಂಗಾರು ಮಳೆ ಅಬ್ಬರದಿಂದ ಜಲಾಶಯ ತುಂಬಿ ಜನರ ಆತಂಕವನ್ನುದೂರ ಮಾಡಿದೆ.

ಜಕ್ಕಲಮಡಗು ಜಲಾಶಯದಲ್ಲಿ ಗರಿಷ್ಠ 64 ಅಡಿಗಳವರೆಗೂ ನೀರು ಸಂಗ್ರಹವಾಗುತ್ತೆ. ಆದರೆ ಮಳೆಯ ಕೊರತೆಯಿಂದ ನೀರಿನ ಮಟ್ಟ ಡೆತ್ ಸ್ಟೋರೇಜ್ ಸೇರಿ 22 ಆಡಿಗಳಿಗೆ ಕುಸಿದಿತ್ತು. ಅದೃಷ್ಟವಶಾತ್ ಹಿಂಗಾರು ಮಳೆಯಿಂದ ಜಲಾಶಯಕ್ಕೆ ನೀರು ಬಂದಿದ್ದು, ಜಲಾಶಯ ತುಂಬಿ ಕೋಡಿ ಹರಿದಿದೆ.
ಜಕ್ಕಲಮೊಡಗು ಜಲಾಶಯ ಭರ್ತಿ..!! ದೊಡ್ಡಬಳ್ಳಾಪುರ – ಚಿಕ್ಕಬಳ್ಳಾಪುರ ನಗರಗಳಿಗೆ ನೆಮ್ಮದಿ#LatestUpdates #latestnewstoday #Jakkalamadagu_Lake pic.twitter.com/785s31k32E
— Harithalekhani (@harithalekhani) October 22, 2024
ಕಳೆದ ವರ್ಷ ಮಳೆಯಿಲ್ಲದೆ ಎರಡು ನಗರಗಳು ನೀರಿನ ಸಮಸ್ಯೆ ಎದುರಿಸುವ ಪರಿಸ್ಥಿತಿ ಇತ್ತು, ಈಗ ಜಲಾಶಯ ಕೋಡಿ ಬಿದ್ದಿರುವ ಕಾರಣ ನೆಮ್ಮದಿ ತಂದಿದೆ ಎಂದು ನಗರಸಭೆಯ ಎಇಇ ರಾಮೇಗೌಡ ಹೇಳಿದ್ದಾರೆ.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಕೆಲವು ದಿನ ಮಳೆಯಾಗುವ ಸಾಧ್ಯತೆ ಇದೆ.