ಬೆಂಗಳೂರು ಗ್ರಾಮಾಂತರ ಜಿಲ್ಲೆ: ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು ನೀಡಲಾಗುವ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕುರಿತು ಹಲವು ಗೊಂದಲ ಏರ್ಪಟ್ಟಿದ್ದು, ಜಿಲ್ಲಾಡಳಿತದ ನಿರ್ಲಕ್ಷ್ಯ ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಕುರಿತು ಅಧಿಕೃತ ಮಾಹಿತಿ ಘೋಷಣೆಯಾಗದೆ ತೀವ್ರ ಗೊಂದಲ ಏರ್ಪಟ್ಟಿದ್ದು, ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ನಾಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ ಆಯೋಜಿಸಲಾಗಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕಿದೆ. ಆದರೆ ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ನೀಡದೇ ಬೇಕಾಬಿಟ್ಟಿ ಎಂಬಂತೆ ಕರೆ ಮಾಡಿ ಮಾಹಿತಿ ನೀಡಲಾಗುತ್ತಿದೆ ಎಂಬ ಬೇಸರ ವ್ಯಕ್ತವಾಗಿದೆ.
ಈಗಾಗಲೇ ಕೆಲವರಿಗೆ ಇಲಾಖೆಯ ಅಧಿಕಾರಿಗಳು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬನ್ನಿ ಎಂದು ಕರೆ ಮಾಡಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇದು ಅಧಿಕೃತ ಆಹ್ವಾನವೇ ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ.
ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕುರಿತು ಸಾಧಕರು ಬಹಳಷ್ಟು ಗೌರವ ಇಟ್ಟುಕೊಂಡಿದ್ದಾರೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ರಶಸ್ತಿಯ ಘನತೆಗೆ ಚ್ಯುತಿ ಬರುತ್ತಿದೆ ಎಂಬ ಅಸಮಾಧಾನ ಕಂಡುಬರುತ್ತಿದೆ.
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸಾಧಕರಿಗೆ ಅಧಿಕೃತ ಆಹ್ವಾನ ನೀಡುವ ಸೌಜನ್ಯ ಜಿಲ್ಲಾಡಳಿತಕ್ಕೆ ಇಲ್ಲವೆ ಎಂಬ ಬೇಸರ ವ್ಯಕ್ತವಾಗಿದೆ. ಈ ಕುರಿತು ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದರೆ, ಕರೆ ಸ್ವೀಕರಿಸದೆ ಪಲಾಯನವಾದ ಅನುಸರಿಸುತ್ತಿದ್ದಾರೆ.
ಒಟ್ಟಾರೆ ನವೆಂಬರ್ ಒಂದರಂದು ನೀಡಲಾಗುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕುರಿತು ವ್ಯಾಪಕ ಅಸಮಾಧಾನ ಕಂಡುಬರುತ್ತಿದ್ದು, ಕೂಡಲೇ ಅಧಿಕಾರಿಗಳು ಹೆಚ್ಚೆತ್ತು. ಸಾಧಕರ ಆಯ್ಕೆ ಪಟ್ಟಿ ಬಿಡುಗಡೆ ಮಾಡಿ, ಗೌರವಯುತವಾಗಿ ಸಾಧಕರನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡುವ ಸೌಜನ್ಯ ತೋರಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.