ದೊಡ್ಡಬಳ್ಳಾಪುರ : ಕೋವಿಡ್-19 ಲಾಕ್ ಡೌನ್ ಪರಿಸ್ಥಿತಿಯಲ್ಲಿ ಮಲೇಷ್ಯಾದ ಕೌಲಾಲಂಪುರ್ ನಿಂದ ಮೇ 19 ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಐದನೇ ವಿಮಾನದಲ್ಲಿ ಗರ್ಭಿಣಿಯರು, ಮಕ್ಕಳು ಸೇರಿದಂತೆ ಒಟ್ಟು 94 ಮಂದಿ ಅನಿವಾಸಿ ಭಾರತೀಯರು ಆಗಮಿಸಿದ್ದಾರೆ.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ರಾತ್ರಿ ಬಂದಿಳಿದ ಒಟ್ಟು 94 ಮಂದಿ ಪ್ರಯಾಣಿಕರಲ್ಲಿ 4 ಗರ್ಭಿಣಿಯರು, ಹತ್ತು ವರ್ಷದೊಳಗಿನ ಐದು ಮಕ್ಕಳು ಸೇರಿದಂತೆ 60 ಪುರುಷರು ಮತ್ತು 34 ಮಹಿಳೆಯರು ಇದ್ದಾರೆ.
ಬಳಿಕ ಏರ್ ಇಂಡಿಯಾ ವಿಮಾನವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಂತರ ಗುಜರಾತ್ ನ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳಿಂದ ಪ್ರಯಾಣಿಸಿ ಬಂದ 94 ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಿಸಲಾಗಿದ್ದು, ಯಾವುದೇ ಪ್ರಯಾಣಿಕರಲ್ಲಿ ಕರೊನಾ ವೈರಾಣು ಸೋಂಕಿನ ಲಕ್ಷಣಗಳು ಕಂಡುಬಂದಿರುವುದಿಲ್ಲ.
ಆರೋಗ್ಯ ತಪಾಸಣೆಯ ಬಳಿಕ, 94 ಪ್ರಯಾಣಿಕರನ್ನು 14 ದಿನಗಳ ಕ್ವಾರಂಟೈನ್ ಗಾಗಿ ಹೋಟೆಲ್ ಗಳಿಗೆ ಬಿಎಂಟಿಸಿ ಬಸ್ ಗಳ ಮೂಲಕ ಕಳುಹಿಸಿಕೊಡಲಾಗಿದ್ದು, ಕ್ವಾರಂಟೈನ್ ವೆಚ್ಚವನ್ನು ಪ್ರಯಾಣಿಕರೇ ಭರಿಸಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ.
(ಸಾಂದರ್ಭಿಕ ಚಿತ್ರ ಬಳಸಲಾಗಿದೆ)