ಬೆಂಗಳೂರು: ನಗರ ಜಿಲ್ಲೆಯ ರೈತರು ಯೂರಿಯಾ ರಸಗೊಬ್ಬರ (Fertilizer) ಖರೀದಿಸಲು ಇನ್ನು ಮುಂದೆ ಫಾರ್ಮರ್ ಐಡಿ (ಎಫ್ಐಡಿ) ಸಂಖ್ಯೆ ಹೊಂದಿರುವುದು ಕಡ್ಡಾಯ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಸೀತಾ ಎಂ.ಸಿ ತಿಳಿಸಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿರುವ ಅವರು, ಪ್ರಸ್ತುತ ಜಾಗತಿಕ ಸನ್ನಿವೇಶದ ಹಿನ್ನೆಲೆಯಲ್ಲಿ ಆತಂಕದ ಕಾರಣ, ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ತರಲು ಮತ್ತು ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ.

ಕೆ-ಕಿಸಾನ್ ತಂತ್ರಾಂಶದ ಬಳಕ ರೈತರು ತಮ್ಮ ಜಮೀನಿನ ವಿಸ್ತೀರ್ಣ ಮತ್ತು ಬೆಳೆದ ಬೆಳೆಗೆ ಅನುಗುಣವಾಗಿ ಅಗತ್ಯ ಇರುವಷ್ಟು ಪ್ರಮಾಣದ ರಸಗೊಬ್ಬರವನ್ನು ಮಾತ್ರ ಕೆ ಕಿಸಾನ್ ತಂತ್ರಾಂಶದ ಮೂಲಕ ವಿತರಿಸಲಾಗುವುದು ಎಂದರು.
ಹೊಸ ಎಫ್ಐಡಿ ನೋಂದಣಿ
ಈವರೆಗೆ ಫಾರ್ಮರ್ ಐಡಿ ಹೊಂದಿರದ ರೈತರು ಕೂಡಲೇ ತಮ್ಮ ಪಹಣಿ, ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ ನೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕಾ ಇಲಾಖೆ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ ಬೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಈಗಾಗಲೆ ಎಫ್.ಐಡಿ ಹೊಂದಿರುವ ರೈತರು ತಮ್ಮ ಎಲ್ಲಾ ಸರ್ವೆನಂಬರ್ ಗಳನ್ನು ಅದಕ್ಕೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದು ತಿಳಿಸಿದ್ದಾರೆ.
ಮಾರಾಟಗಾರರಿಗೆ ಎಚ್ಚರಿಕೆ
ಅಧಿಕೃತ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಕೆ-ಕಿಸಾನ್ ತಂತ್ರಾಂಶದಲ್ಲಿ ರೈತರ ಎಫ್ಐಡಿ ನಮೂದಿಸಿ ಗೊಬ್ಬರ ಮಾರಾಟಮಾಡಬೇಕು ಇದಕ್ಕೆ ಸಂಬಂಧಿಸಿದಂತೆ ಇಲಾಖೆ ತರಬೇತಿ ಹಾಗೂ ಮಾಹಿತಿ ನೀಡಲಾಗಿದೆ ಚಿಲ್ಲರೆ ರಸಗೊಬ್ಬರ ಮಾರಾಟ ಗಾರರು ತಮ್ಮ ಎಲ್ಲ “ಓ“ ಫಾರಂಗಳನ್ನು ನವೀಕರಣಗೊಳಿಸಿಕೊಳ್ಳಬೇಕು.
ಒಂದು ವೇಳೆ ಮಾರಾಟಗಾರರು ‘ಓ’ ಫಾರಂಗಳ ನೋಂದಣಿ ಇಲ್ಲದೆ ಮಾರಾಟ ಮಾಡಿದರೆ, ನಿಯಮ ಮೀರಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಥವಾ ಕೃಷಿಯೇತರ ಉದ್ದೇಶಕ್ಕೆ ರಸಗೊಬ್ಬರ ನೀಡಿದರೆ ಅಂತಹ ಮಾರಾಟಗಾರರ ಪರವಾನಾಗಿಯನ್ನು ರದ್ದುಗೊಳಿಸಲಾಗುವುದು ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ರೂಪ ವಿ.ಎಂ ತಿಳಿಸಿದ್ದಾರೆ.
