ದೊಡ್ಡಬಳ್ಳಾಪುರ: ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನವಾದ ಆ15 ರಂದೇ ಪೊಲೀಸರು ರಾಯಣ್ಣ ಅವರ ಪ್ರತಿಮೆ ತೆರವುಗೊಳಿಸಿದ್ದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನವಾಗಿದ್ದು, ಮನುವಾದಿ ಸರ್ಕಾರಗಳನ್ನು ನಾವು ಕಿತ್ತೊಗೆಯಬೇಕು ಎಂದು ದಲಿತ ವಿಮೋಚನಾ ಸೇನೆಯ ರಾಜ್ಯ ಅದ್ಯಕ್ಷರಾದ ಮಾ.ಮುನಿರಾಜು ಅವರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಜಾತಿಗ್ರಸ್ಥ ಮನುವಾದಿಗಳು ನಮ್ಮ ದೇಶವನ್ನು ಆಳ್ವಿಕೆ ಮಾಡುತ್ತಿದ್ದು ಜನಪರ ಮೌಲ್ಯಗಳನ್ನು ಧಿಕ್ಕರಿಸಿ ಸಂವಿಧಾನ ಬದ್ಧವಾಗಿ ಪ್ರತಿಭಟನೆ ಮಾಡುತ್ತಿದ್ದ ಕನ್ನಡಪರ ಸಂಘಟನೆಗಳ ಮೇಲೆ ಕೇಸು ದಾಖಲು ಮಾಡಿರುವುದು ಖಂಡನೀಯ ಎಂದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಎಂ.ಕೃಷ್ಣಮೂರ್ತಿ ಅವರು ಮಾತನಾಡಿ ರಾಜ್ಯದಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ಸಂಗೊಳ್ಳಿ ರಾಯಣ್ಣ ಅವರು ಗಾಂಧಿ, ಅಂಬೇಡ್ಕರ್ ಅವರಂತೆ ಚಿರಸ್ಮರಣೀಯರು ಎಂದ ಅವರು ಸರ್ಕಾರದ ಆದೇಶವಿಲ್ಲದೆ ಪೊಲೀಸರು ಪ್ರತಿಮೆ ತೆರವುಗೊಳಿಸಲು ಸಾದ್ಯವಿಲ್ಲ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವ ಕನಿಷ್ಠ ಬದ್ಧತೆ ಈ ಸರ್ಕಾರಕ್ಕಿಲ್ಲ, ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡಿ ಜೈಲಿಗೆ ತಳ್ಳಿದ್ದು ಸರಿಯಲ್ಲ ಈ ಕೂಡಲೇ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ ಅವರು ಸರ್ಕಾರ ತನ್ನ ನಿಲುವನ್ನು ಬದಲಾಯಿಸಿಕೊಳ್ಳದೆ ಹೋದರೆ ರಾಜ್ಯದಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯ ತಾಲ್ಲೂಕು ಅದ್ಯಕ್ಷ ಮಾರಣ್ಣ, ತಾಲ್ಲೂಕು ಕನ್ನಡ ಪಕ್ಷದ ಅದ್ಯಕ್ಷ ಸಂಜೀವನಾಯ್ಕ್. ಕಾರ್ಯದರ್ಶಿ ಡಿ.ಪಿ.ಅಂಜನೇಯ,ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಶ್ರೀನಿವಾಸ್ ದಸಂಸ ಮುಖಂಡರಾದ ರಾಜುಸಣ್ಣಕ್ಕಿ ಛಲವಾದಿ ಸುರೇಶ್ ಮಾಜಿ ನಗರಸಭಾ ಸದಸ್ಯ ಮಲ್ಲೇಶ್, ವಹ್ನಿಕುಲ ಕ್ಷತ್ರಿಯ ಸಂಘದ ಪು.ಮಹೇಶ್,ಕರವೆ ಪ್ರವೀಣ್ ಶೆಟ್ಟಿ ಬಣದ ಅಬ್ದುಲ್ ಬಶೀರ್ ಇದ್ದರು.