ದೊಡ್ಡಬಳ್ಳಾಪುರ: ಬೆಂಗಳೂರು ನಗರದ ಸುತ್ತಲಿನ ತಾಲ್ಲೂಕುಗಳು ಬೆಂಗಳೂರಿನ ಒಂದು ಭಾಗವಾಗಿ ಬೆರೆತು ಹೋಗಿವೆ. ಹೀಗಾಗಿಯೇ ಹೊರವಲಯದ ನಾಲ್ಕು ತಾಲ್ಲೂಕುಗಳನ್ನು ಒಳಗೊಂಡ ಜಿಲ್ಲೆಗೆ ಬೆಂಗಳೂರು ಗ್ರಾಮಾಂತರ ಎನ್ನುವ ಹೆಸರನ್ನು ನಮ್ಮ ಹಿರಿಯರು ನಾಮಕರಣ ಮಾಡಿದ್ದಾರೆ. ಯಾವುದೇ ಕಾರಣಕ್ಕು ಜಿಲ್ಲೆಯ ಹೆಸರನ್ನು ಒಂದು ತಾಲ್ಲೂಕಿನ ಹೆಸರಿನಿಂದ ಗುರುತಿಸಿ ಕರೆಯುವುದಕ್ಕೆ ನಮ್ಮ ತೀವ್ರ ವಿರೋಧ ಇದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಅಪ್ಪಯ್ಯಣ್ಣ ಹೇಳಿದ್ದಾರೆ.
ಅವರು ಈ ಬಗ್ಗೆ ಹರಿತಲೇಖನಿಗೆ ಹೇಳಿಕೆ ನೀಡಿ, ದಶಕಗಳಿಂದಲು ಬೆಂಗಳೂರು ನಗರದ ಹೃದಯ ಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜಿಲ್ಲಾಧಿಕಾರಿಗಳ ಕಚೇರಿಯನ್ನು ಗ್ರಾಮಾಂತರ ಜಿಲ್ಲೆಯ ತಾಲ್ಲೂಕಿಗೆ ಸ್ಥಳಾಂತರ ಮಾಡುವಾಗ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆಯನ್ನು ದೊಡ್ಡಬಳ್ಳಾಪುರ ತಾಲ್ಲೂಕು ಹೊಂದಿತ್ತು. ಆದರೆ ಸಾರಿಗೆ ವ್ಯವಸ್ಥೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಜನರಿಗೆ ಮಧ್ಯಭಾಗದಲ್ಲಿ ಇರಲಿ ಎನ್ನುವ ದೃಷ್ಠಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯನ್ನು ದೊಡ್ಡಬಳ್ಳಾಪುರ-ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿ ಸಮೀಪದ ಚಪ್ಪರದಕಲ್ಲೆ ಗ್ರಾಮದಲ್ಲಿ ನಿರ್ಮಿಸಲು ಒಪ್ಪಿಗೆ ನೀಡಲಾಯಿತು. ಇದನ್ನು ದುರುಪಯೋಗ ಮಾಡಿಕೊಂಡು ಈಗ ಜಿಲ್ಲೆಯ ಹೆಸರನ್ನೇ ಬದಲಾವಣೆ ಮಾಡುವುದು ಸರಿಯಾದ ಕ್ರಮ ಅಲ್ಲ. ದಶಕಗಳಿಂದಲು ಉಳಿದು ಬಂದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎನ್ನುವ ಹೆಸರೆ ಮುಂದುವರೆಯಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.