
ಬೆಂಗಳೂರು: ತೀವ್ರ ಆರ್ಥಿಕ ಸಂಕಷ್ಟ, ಸಮುದಾಯಗಳನ್ನು ಸಂತೃಪ್ತಿಪಡಿಸುವ ಸವಾಲುಗಳ ನಡುವೆ ಗುರುವಾರದಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುತ್ತಿದೆ.

ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಿರುವ ಕಾಂಗ್ರೆಸ್ ಇದೀಗ ಸದನದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರವಾಗಿ ಸ್ವಲ್ಪ ಮಟ್ಟಿಗೆ ಅನುಕಂಪ ಹೊಂದಿರುವ ಜೆಡಿಎಸ್, ಸದನದಲ್ಲಿ ಯಾರು ಯಾರ ಪರ, ಯಾರು ಯಾರ ವಿರುದ್ಧ ಎನ್ನುವ ಗೊಂದಲ ನಿರ್ಮಾಣವಾಗುವ ಸಾಧ್ಯತೆಗಳು ಸಹ ನಿರ್ಮಾಣವಾಗಲಿದೆ.
ರಮೇಶ್ ಜಾರಕಿ ಹೊಳಿ CD ರಾಸಲೀಲೆ ಪ್ರಕರಣ ಸದನದಲ್ಲಿ ಪ್ರತಿಧ್ವನಿಸಲಿದೆ. ಈಗಾಗಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಸಹ ಸದನದಲ್ಲಿ ಈ ವಿಚಾರ ಅಲ್ಲಲ್ಲಿ ಪ್ರಸ್ತಾಪವಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಮೀಸಲಾತಿಗಾಗಿ ವಿವಿಧ ಸಮುದಾಯಗಳು ನಡೆಸಿರುವ ಹೋರಾಟ ಸರ್ಕಾರಕ್ಕೆ ಇರುಸು – ಮುರುಸು ಉಂಟುಮಾಡಲಿದೆ. ಶಾಸಕರು ತಮ್ಮ ಸಮುದಾಯಗಳ ಪರ ಸದನದಲ್ಲಿ ಧ್ವನಿ ಎತ್ತಿ ತಮ್ಮ ಜಾತಿ, ಜನಾಂಗಗಳಿಗೆ ಮೀಸಲಾತಿ, ನಿಗಮ ಮಂಡಳಿಗಳ ರಚನೆ, ಹಣಕಾಸು ನೆರವಿಗಾಗಿ ಒತ್ತಡ ಹೇರಲಿವೆ.
ಬೆಲೆ ಏರಿಕೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ. ಇಡೀ ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ರಾಜ್ಯದಲ್ಲಿ ಅತಿ ಹೆಚ್ಚು ಇದ್ದು, ತೆರಿಗೆ ದರ ಕಡಿಮೆ ಮಾಡುವಂತೆ ವಿಪಕ್ಷಗಳು ಆಗ್ರಹಿಸಲಿವೆ. ಗಗನಕ್ಕೇರಿರುವ ಪೆಟ್ರೋಲ್-ಡೀಸೆಲ್, ಅಡುಗೆ ಅನಿಲದ ಬೆಲೆಯಿಂದ ಜನಸಾಮಾನ್ಯರಿಗೆ ಆಗಿರುವ ತೊಂದರೆಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ವಾಗ್ಬಾಣ ಬಿಡಲು ಸಜ್ಜಾಗಿವೆ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯನ್ನು ಕಡಿಮೆ ಮಾಡಲು ಸ್ಥಳೀಯ ತೆರಿಗೆಗಳನ್ನು ಕಡಿತ ಮಾಡಲು ಪ್ರತಿಪಕ್ಷಗಳು ಸದನದಲ್ಲಿ ಪಟ್ಟು ಹಿಡಿಯುವ ಸಾಧ್ಯತಗಳಿವೆ.
ಆಡಳಿತ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದು, ಇದು ಪ್ರತಿಪಕ್ಷಗಳಲ್ಲಿ ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್ ಗೆ ಹೆಚ್ಚು ವರದಾನವಾಗಲಿದೆ. ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಅಸಮಾಧಾನ ಅತೃಪ್ತಿಗಳನ್ನು ಬಂಡವಾಳ ಮಾಡಿಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸಜ್ಜಾಗಿದೆ.
ಬಜೆಟ್ ಅಧಿವೇಶನದ ಮೊದಲು ಎರಡು ದಿನಗಳಲ್ಲಿ ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಸುದೀರ್ಘ ಚರ್ಚೆ ನಡೆಯಲಿದೆ. ಬಜೆಟ್ ಅಧಿವೇಶನ ಈ ತಿಂಗಳ ಅಂತ್ಯದವರೆಗೂ ನಡೆಯಲಿದ್ದು, ಮಾ. 8 ರಂದು ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದಾರೆ.
ಈ ಅಧಿವೇಶನದಲ್ಲಿ ಹಲವು ಪ್ರಮುಖ ವಿಧೇಯಕಗಳು ಮಂಡನೆಯಾಗಲಿವೆ. ಉಳಿದಂತೆ ಪ್ರಶ್ನೋತ್ತರ ಕಲಾಪ, ಶೂನ್ಯ ವೇಳೆ ಗಮನ ಸೆಳೆಯುವ ಕಲಾಪಗಳು, ನಿಯಮ 69ರ ಅಡಿ ಚರ್ಚೆ ಕಲಾಪಗಳು ನಿಗದಿಯಾಗಿವೆ. ಆದರೆ ವಿಷಯಗಳಿಗಿಂತ ಅನಗತ್ಯ ವಿಷಯಗಳೇ ಹೆಚ್ಚು ಪ್ರಾಧಾನ್ಯತೆ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

