ದೊಡ್ಡಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯಲ್ಲಿನ ಡಿವೈಡರ್ಗೆ ಡಿಕ್ಕಿ (Accident) ಹೊಡೆದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಚೆನ್ನಬಸಯ್ಯನಪಾಳ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಮಂಗಳವಾರ ರಾತ್ರಿ 10 ಗಂಟೆಗೆ ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಚೆನ್ನಬಸಯ್ಯನಪಾಳ್ಯ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಕಾರಿನ ಚಾಲಕ ಜಗನ್ನಾಥಪುರದ ನಿವಾಸಿ ದುರ್ಗಾಪ್ರಸಾದ್ (30 ವರ್ಷ) ಎನ್ನುವವರಿಗೆ ಗಂಭಿರವಾದ ಗಾಯಗಳಾಗಿದ್ದು, ತುಮಕೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳಪರಿಶೀಲನೆ ನಡೆಸಿದ್ದಾರೆ.
ದೊಡ್ಡಬಳ್ಳಾಪುರ: ನಟ ಚೇತನ್ ಅಹಿಂಸಾ ವಿರುದ್ಧ ದೂರು. ಗಡಿಪಾರಿಗೆ ಕನ್ನಡಪರ ಸಂಘಟನೆಗಳ ಆಗ್ರಹ

ದೊಡ್ಡಬಳ್ಳಾಪುರ: ವರನಟ ಡಾ.ರಾಜ್ ಕುಮಾರ್ ಸಮಾಧಿಗೆ ಜಾಗ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನಟ ಚೇತನ್ ಅಹಿಂಸಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಚೇತನ್ ಅಹಿಂಸಾ (Chethan Ahimsa) ವಿರುದ್ಧ ಕನ್ನಡಪರ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಡಾ.ರಾಜ್ ಕುಮಾರ್ ಸಮಾಧಿಗೆ ಸರ್ಕಾರ 2.5 ಎಕರೆ ಜಾಗ ನೀಡಿದ್ದಕ್ಕೆ ನಟ ಚೇತನ್ ಅಹಿಂಸಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದರು.
2.5 ಎಕರೆ ಜಾಗ ನೀಡಿದ್ದು ತಿಳುವಳಿಕೆಯ ನಿರ್ಧಾರವಾಗಿತ್ತಾ? 21ನೇ ಶತಮಾನದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರ ಸಾರ್ವಜನಿಕರ ಉಪಯೋಗಕ್ಕೆ ಭೂಮಿ ಹಂಚಬೇಕು ಮತಗಳ ಉದ್ದೇಶದಿಂದ ಹಂಚಬಾರದು ಎಂದು ಪೋಸ್ಟ್ ಹಾಕಿದ್ದರು.
ನಟ ಚೇತನ್ ಅಹಿಂಸಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಚೇನತ್ ವಿರುದ್ಧ ಡಾ.ರಾಜ್ ಕುಮಾರ್ ಅಭಿಮಾನಿಗಳು, ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೇ ದೊಡ್ಡಬಳ್ಳಾಪುರ ನಗರ ಪೊಲಿಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಅಮರೇಶ್ ಗೌಡ ಅವರಿಗೆ ಚೇತನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಗಡಿಪಾರು ಮಾಡುವಂತೆ ಒತ್ತಾಯಿಸಿವೆ.
ಈ ವೇಳೆ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಸು. ನರಸಿಂಹಮೂರ್ತಿ, ಕನ್ನಡಪರ ಸಂಘಟನೆಗಳ ಮುಖಂಡರಾದ ತ.ನ.ಪ್ರಭುದೇವ, ಸಂಜೀವನಾಯ್ಕ್, ರಾಜಘಟ್ಟರವಿ, ಡಿ.ಪಿ. ಆಂಜನೇಯ, ಪ್ರಮಿಳಾ ಮಹದೇವ್, ಪರಮೇಶ್, ಚೌಡರಾಜ್, ರಮೇಶ್, ಜನಪರ ಮಂಜುನಾಥ್, ಗುರು, ನವೀನ್, ಸೂರಿ, ಮಂಜು, ಮನು, ನಾಗಣ್ಣ ಮತ್ತಿತರರಿದ್ದರು.

